

ನವದೆಹಲಿ: ಮಹಿಳೆಯರ ವಿವಾಹ ವಯಸ್ಸು ನಿಗದಿ ಮಾಡುವುದಕ್ಕೆ ಸರ್ಕಾರ ಒಂದು ಟಾಸ್ಕ್ಫೋರ್ಸ್ ಅನ್ನು ರಚಿಸಲಿದೆ. ಈ ಟಾಸ್ಕ್ಫೋರ್ಸ್ ಎಲ್ಲ ಸಮುದಾಯದವರಿಗೂ ಅನ್ವಯವಾಗುವಂತೆ ಮಹಿಳೆಯರ ವಿವಾಹ ವಯಸ್ಸನ್ನು ನಿಗದಿ ಮಾಡಿ ಶಿಫಾರಸು ಮಾಡಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅವರು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020 ಮಂಡಿಸುತ್ತ, ಈ ಸಲದ ಮುಂಗಡಪತ್ರದಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಕ್ಕೆ 9,500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದೇ ರೀತಿ, ಪೌಷ್ಟಿಕಾಂಶ ಸಂಬಂಧಿತ ಕಾರ್ಯಗಳಿಗೆ 35,600 ಕೋಟಿ ರೂಪಾಯಿಯನ್ನು ತೆಗೆದಿರಿಸಲಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಅದರ್ ಬ್ಯಾಕ್ವರ್ಡ್ ಕ್ಲಾಸಸ್ ಸಮುದಾಯದವರಿಗಾಗಿ 85,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಜಾರ್ಖಂಡ್ನ ರಾಂಚಿಯಲ್ಲಿ ಬುಡಕಟ್ಟು ಮ್ಯೂಸಿಯಂ ಸ್ಥಾಪನೆ ವಿಚಾರ ಪ್ರಸ್ತಾಪಿಸಿದರು. ಅಲ್ಲದೆ,ಹರಿಯಾಣ, ಅಸ್ಸಾಂ, ಉತ್ತರಪ್ರದೇಶ, ಗುಜರಾತ್, ತಮಿಳುನಾಡುಗಳಲ್ಲಿ ಆನ್ಸೈಟ್ ಮ್ಯೂಸಿಯಂ ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.
ಸಂಸ್ಕೃತಿ ಸಚಿವಾಲಯಕ್ಕ್ರೆ 3,150 ಕೋಟಿ ರೂಪಾಯಿ, ಪ್ರವಾಸೋದ್ಯಮ ಸಚಿವಾಲಯಕ್ಕೆ 2,500 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ ಎಂದರು. (ಏಜೆನ್ಸೀಸ್)