

ನವದೆಹಲಿ: ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಖಾಸಗಿ ಮಸೂದೆ ಮಂಡನೆ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಶುಕ್ರವಾರ ಪ್ರತಿಪಕ್ಷಗಳು ಭಾರಿ ಪ್ರತಿಭಟನೆ ನಡೆಸಿದವು. ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಅವರು ಏಕರೂಪ ನಾಗರಿಕ ಸಂಹಿತೆಯನ್ನು ಸಿದ್ಧಪಡಿಸಲು ಮತ್ತು ಭಾರತದಾದ್ಯಂತ ಅದರ ಅನುಷ್ಠಾನಕ್ಕಾಗಿ ರಾಷ್ಟ್ರೀಯ ತಪಾಸಣೆ ಮತ್ತು ತನಿಖಾ ಸಮಿತಿ ರಚನೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಮಂಡಿಸಿದರು.
ಮಸೂದೆ ಜಾರಿಗೆ ಬಂದರೆ ಅದು ದೇಶದಲ್ಲಿ ಪ್ರಚಲಿತದಲ್ಲಿರುವ ಸಾಮಾಜಿಕ ರಚನೆ ಮತ್ತು ವಿವಿಧತೆಯಲ್ಲಿನ ಏಕತೆಯನ್ನು ನಾಶ ಮಾಡುತ್ತದೆ ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಂಡಿಎಂಕೆ, ಆರ್ಜೆಡಿ, ಎಸ್ಪಿ , ಸಿಪಿಐ, ಸಿಪಿಐ(ಮಾರ್ಕ್ಸಿಸ್ಟ್), ಎನ್ಸಿಪಿ ಸದಸ್ಯರು ಆತಂಕ ವ್ಯಕ್ತಪಡಿಸಿದರು. ಈ ಹಿಂದೆ ಮಸೂದೆಯನ್ನು ಪರಿಚಯಿಸಲು ಪಟ್ಟಿ ಮಾಡಲಾಗಿದ್ದರೂ ಅದನ್ನು ಮೇಲ್ಮನೆಯಲ್ಲಿ ಮಂಡಿಸಿರಲಿಲ್ಲ. ಈ ಮಸೂದೆಯ ಪರವಾಗಿ 63 ಮತಗಳು ಹಾಗೂ ವಿರುದ್ಧ ವಾಗಿ 23 ಮತಗಳು ಚಲಾವಣೆಗೊಂಡವು. ಧರ್ಮವನ್ನು ಪರಿಗಣಿಸದೆ ಎಲ್ಲ ನಾಗರಿಕರ ವೈಯಕ್ತಿಕ ಕಾನೂನುಗಳನ್ನು ರೂಪಿಸುವ ಮತ್ತು ಕಾರ್ಯಗತ ಗೊಳಿಸುವ ಕೆಲಸವನ್ನು ಈ ಮಸೂದೆ ಮಾಡುತ್ತದೆ.
ಸೂಕ್ಷ್ಮ ವಿಷಯವಾಗಿರುವ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ಕುರಿತು ಚರ್ಚೆಗಳಾಗಿವೆ. ಮಧ್ಯಪ್ರದೇಶ ಈ ಮಸೂದೆ ರಚನೆಗಾಗಿ ಕಳೆದ ಡಿ.2ರಂದು ಸಮಿತಿಯೊಂದನ್ನು ರಚಿಸಿತ್ತು.
3.25 ಲಕ್ಷ ಕೋಟಿ ರೂ. ಹೆಚ್ಚುವರಿ ವೆಚ್ಚ: ಪ್ರಸಕ್ತ ಹಣಕಾಸು ವರ್ಷದಲ್ಲಿ ರಸಗೊಬ್ಬರ ಸಬ್ಸಿಡಿ ಪಾವತಿಗೆ 1.09 ಲಕ್ಷ ಕೋಟಿ ಸೇರಿ 3.25 ಲಕ್ಷ ಕೋಟಿ ರೂಪಾಯಿಗೂ ಅಧಿಕ ನಿವ್ವಳ ಹೆಚ್ಚುವರಿ ವೆಚ್ಚಕ್ಕಾಗಿ ಕೇಂದ್ರ ಸರ್ಕಾರ ಸಂಸತ್ತಿನ ಅನುಮೋದನೆ ಕೋರಿದೆ. ಈ ಹೆಚ್ಚುವರಿ ಖರ್ಚು 2022-23ರ ಬಜೆಟ್ನಲ್ಲಿ ಪ್ರಸ್ತಾಪಿಸಲಾದ ಮೊತ್ತಕ್ಕಿಂತ ಹೆಚ್ಚಾಗಿದೆ. ಬಜೆಟ್ ಪ್ರಕಾರ ಕಳೆದ ಹಣಕಾಸು ವರ್ಷದ 37.70 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ 2022-23ಕ್ಕೆ 39.45 ಲಕ್ಷ ಕೋಟಿ ರೂಪಾಯಿಗಳ ಒಟ್ಟು ವೆಚ್ಚವನ್ನು ಸರ್ಕಾರ ಅಂದಾಜಿಸಿದೆ. ಬಡವರಿಗೆ ಉಚಿತ ಆಹಾರ ಧಾನ್ಯ ವಿತರಿಸಲು ಆಹಾರ, ಗ್ರಾಹಕ ವ್ಯವಹಾರಗಳ ಸಚಿವಾಲಯದ ವೆಚ್ಚವನ್ನು ಪೂರೈಸಲು 80,348.25 ಕೋಟಿ ರೂ.ಗೆ ಅನುಮೋದನೆ ಕೋರಲಾಗಿದೆ.
ನ್ಯಾಯಾಂಗ ಆಯೋಗ ಮಸೂದೆಗೆ ವಿರೋಧ
ರಾಷ್ಟ್ರೀಯ ನ್ಯಾಯಾಂಗ ಆಯೋಗದ ಮೂಲಕ ನ್ಯಾಯಾಧೀಶರ ನೇಮಕವನ್ನು ನಿಯಂತ್ರಿಸುವ ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಸಿಪಿಐ(ಎಂ)ನ ಬಿಕಾಶ್ ಭಟ್ಟಾಚಾರ್ಯ ಮಂಡಿಸಿದರು. ಆದರೆ ಇದಕ್ಕೆ ಎಎಪಿ ಸಂಸದ ರಾಘವ್ ಚಡ್ಡಾ ವಿರೋಧ ವ್ಯಕ್ತಪಡಿಸಿದರು. ಇದರ ಪರವಾಗಿ ಹೆಚ್ಚು ಧ್ವನಿ ಮತಗಳು ಬಂದ ನಂತರ ರಾಷ್ಟ್ರೀಯ ನ್ಯಾಯಾಂಗ ಆಯೋಗ ಮಸೂದೆ (ಎನ್ಜೆಎಸಿ) - 2022 ಅನ್ನು ಮಂಡಿಸಲಾಯಿತು. ಭಾರತದ ಮುಖ್ಯ ನ್ಯಾಯಾಧೀಶರು, ಸುಪ್ರೀಂಕೋರ್ಟ್ನ ನ್ಯಾಯಾಧೀಶರು ಮತ್ತು ಹೈಕೋರ್ಟ್ಗಳಿಗೆ ನ್ಯಾಯಾಧೀಶರ ನೇಮಕಕ್ಕೆ ಜನರನ್ನು ಶಿಫಾರಸು ಮಾಡಲು ರಾಷ್ಟ್ರೀಯ ನ್ಯಾಯಾಂಗ ಆಯೋಗವು ಅನುಸರಿಸಬೇಕಾದ ಕಾರ್ಯವಿಧಾನವನ್ನು ಈ ಮಸೂದೆ ಹೊಂದಿದೆ. ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಎಎಪಿ ಸದಸ್ಯ ಚಡ್ಡಾ ಅವರು , ಎನ್ಜೆಎಸಿ ಪರಿಕಲ್ಪನೆಯು 19993,1998 ಮತ್ತು 2016ರಲ್ಲಿ ಮೂರು ಬಾರಿ ಸುಪ್ರೀಂಕೋರ್ಟ್ ಪರಿಗಣನೆಗೆ ಬಂದಿತ್ತು. ಮೂರು ಬಾರಿಯೂ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡುವಾಗ ಸುಪ್ರೀಂಕೋರ್ಟ್ ಎನ್ಜೆಎಸಿ ಚೌಕಟ್ಟನ್ನು ವಜಾಗೊಳಿಸಿತು ಎಂದು ಹೇಳಿದರು.
ಕಲಾಪದ ಪ್ರಮುಖಾಂಶಗಳು
ಕರ್ನಾಟಕ ಎಸ್ಟಿ ಪಟ್ಟಿ ಪರಿಷ್ಕರಣೆ
ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಪರಿಷ್ಕರಿಸಲು ನಾಲ್ಕು ಪ್ರತ್ಯೇಕ ಮಸೂದೆಗಳನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರು ಕರ್ನಾಟಕ, ತಮಿಳುನಾಡು, ಛತ್ತೀಸ್ಗಢ ಮತ್ತು ಹಿಮಾಚಲ ಪ್ರದೇಶಗಳಿಗೆ ಸಂವಿಧಾನ (ಪರಿಶಿಷ್ಟ ಬುಡಕಟ್ಟ) ಆದೇಶ(ತಿದ್ದುಪಡಿ) ಮಸೂದೆಗಳನ್ನು ಮಂಡಿಸಿದರು. ಈ ಮಸೂದೆಯು ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಪಟ್ಟಿಯನ್ನು ಪರಿಷ್ಕರಿಸಲಿದೆ.