ಏಕರೂಪ ಸಂಹಿತೆ ಚರ್ಚೆ: ಬಲವಾಗಿ ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ

Uniform Civil Code
Published on

ದೇಶದಲ್ಲಿ ಎಲ್ಲ ಪ್ರಜೆಗಳಿಗೂ ಒಂದೇ ತರಹದ ಕಾನೂನು ಅನ್ವಯವಾಗಬೇಕು ಎಂಬ ಚಿಂತನೆಯ ಹಿನ್ನೆಲೆಯಲ್ಲಿ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯಾಗಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಇದು ಅಗತ್ಯ ಸಹ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಪ್ರತಿಪಾದಿಸುತ್ತಿರುವ ಪ್ರಮುಖ ವಿಷಯಗಳಲ್ಲಿ ಇದೂ ಒಂದು. ಅಯೋಧ್ಯೆ ರಾಮಮಂದಿರ, ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿ ರದ್ದತಿ- ಮುಂತಾದ ತನ್ನ ಧ್ಯೇಯೋದ್ದೇಶವನ್ನು ಬಿಜೆಪಿ ರ್ತಾಕ ಅಂತ್ಯಕ್ಕೆ ತಂದಿದ್ದು ಮುಂದಿನ ಸರದಿ ಏಕರೂಪ ನಾಗರಿಕ ಸಂಹಿತೆಯದಾಗುವ ಲಕ್ಷಣಗಳು ಗೋಚರಿಸಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಈಗ ಈ ವಿಷಯವನ್ನು ಚರ್ಚೆಯ ಮುನ್ನೆಲೆಗೆ ತಂದಿದ್ದು, ಸಾರ್ವಜನಿಕ ವಲಯದಲ್ಲಿ ಚಿಂತನಮಂಥನ ಹೆಚ್ಚುವ ಸಾಧ್ಯತೆ ದಟ್ಟವಾಗಿದೆ. ಕೆಲ ದಿನಗಳ ಹಿಂದೆ 22ನೇ ರಾಷ್ಟ್ರೀಯ ಕಾನೂನು ಆಯೋಗ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆದುಕೊಳ್ಳಲು ಮುಂದಾಗಿರುವುದು ಇಲ್ಲಿ ಉಲ್ಲೇಖನೀಯ. ಈ ನೀತಿ ಜಾರಿಗೆ ಬಂದರೆ, ವಿವಾಹ, ಆಸ್ತಿ, ವಿಚ್ಛೇದನ ಮುಂತಾದ ವಿಚಾರಗಳಲ್ಲಿ ಎಲ್ಲ ಮತಧರ್ಮಗಳು ಸಮಾನ ಕಾನೂನಿಗೆ ಒಳಪಡುತ್ತವೆ. ಸದ್ಯ ಈ ವಿಷಯಗಳ ಬಗ್ಗೆ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಲ್ಲಿ ಭಿನ್ನ ಭಿನ್ನ ನಿಯಮ, ಕಾನೂನುಗಳು ರೂಢಿಯಲ್ಲಿವೆ.

ಕೆಳಹಂತದ ನ್ಯಾಯಾಲಯ ಗಳು, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್​ಗಳಲ್ಲಿ ನಡೆದ ವಿವಿಧ ಪ್ರಕರಣಗಳ ಸಂದರ್ಭದಲ್ಲೂ ನಾಗರಿಕ ಸಂಹಿತೆ ಬಗ್ಗೆ ಚರ್ಚೆಯಾಗಿದ್ದಲ್ಲದೆ, ಇಂಥ ಕಾನೂನಿನ ಅಗತ್ಯದ ಬಗ್ಗೆ ನ್ಯಾಯಾಲಯಗಳು ಅಭಿಪ್ರಾಯ ನೀಡಿವೆ. ಸಂವಿಧಾನದ 44ನೇ ವಿಧಿ ಕೂಡ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. 21ನೇ ಕಾನೂನು ಆಯೋಗ ಸಹ ಈ ವಿಷಯವನ್ನು ಪರಿಶೀಲಿಸಿತ್ತು ಮತ್ತು ಜನರಿಂದ ಅಭಿಪ್ರಾಯಗಳನ್ನು ಕೇಳಿತ್ತು. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ನಿಲುವು ಮತ್ತು ನಡೆ ಕುತೂಹಲಕರ. 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಚಾರ ಮಹತ್ವ ಪಡೆದುಕೊಂಡಿದೆ. ಇದು ಬಿಜೆಪಿ ಮತಬ್ಯಾಂಕ್ ಕ್ರೋಡೀಕರಣಕ್ಕೆ ನೆರವಾಗಬಹುದೆಂಬುದು ರಾಜಕೀಯ ತಜ್ಞರ ಅನಿಸಿಕೆ.

ಬಿಜೆಪಿ ಅಧಿಕಾರದಲ್ಲಿರುವ ಉತ್ತರಾಖಂಡ, ಗುಜರಾತ್​ನಲ್ಲಿ ಈಗಾಗಲೇ ಈ ಸಂಬಂಧ ತಜ್ಞರ ಸಮಿತಿಗಳನ್ನೂ ರಚಿಸಲಾಗಿದೆ. ಬಿಜೆಪಿ ಹೊರತುಪಡಿಸಿದ ಬಹುತೇಕ ಪಕ್ಷಗಳು ಸಮಾನ ಸಂಹಿತೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಏಕರೂಪ ಸಂಹಿತೆಯ ಅಗತ್ಯವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ಮೋದಿ, ‘ಒಂದೇ ಮನೆಯಲ್ಲಿ ಒಬ್ಬ ಸದಸ್ಯನಿಗೆ ಒಂದು ನಿಯಮ, ಮತ್ತೊಂದು ಸದಸ್ಯನಿಗೆ ಇನ್ನೊಂದು ನಿಯಮ ಇರಲು ಸಾಧ್ಯವೇ? ಹಾಗಿದ್ದಲ್ಲಿ ಆ ಮನೆ ಚೆನ್ನಾಗಿ ನಡೆದುಕೊಂಡು ಹೋಗುತ್ತದೆಯೇ?’ ಎಂದು ಪ್ರಶ್ನಿಸಿದ್ದಾರಲ್ಲದೆ, ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದು, ಜನರಲ್ಲಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿವೆ ಎಂದು ಕಿಡಿಕಾರಿದ್ದಾರೆ. ರಾಜಕೀಯ ವಾದವಿವಾದ ಏನೇ ಇದ್ದರೂ, ದೇಶದ ಜನರು ಸಹ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿ, ಈ ವಿಷಯವಾಗಿ ಒಂದು ನಿಷ್ಕರ್ಷೆಗೆ ಬರಲು ಸಕ್ರಿಯ ಪಾತ್ರನಿರ್ವಹಿಸಬೇಕಾದ ಅಗತ್ಯವಿದೆ. ಏಕೆಂದರೆ, ಇದರಲ್ಲಿ ದೇಶಹಿತದ ಪ್ರಶ್ನೆ ಅಡಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net