

ನವದೆಹಲಿ: ದೇಶಾದ್ಯಂತ ಬೋರ್ಡ್ ಮಟ್ಟದ ಪರೀಕ್ಷೆ ಹಾಗೂ 10 ಮತ್ತು 12ನೇ ತರಗತಿಗಳ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಏಕರೂಪದ ಮಾದರಿಗಾಗಿ (ಸ್ಟಾ್ಯಂಡರ್ಡ್) ರಾಷ್ಟ್ರೀಯ ಮೌಲ್ಯಮಾಪನ ಕೇಂದ್ರ (ನ್ಯಾಕ್) ಸ್ಥಾಪಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್ಆರ್ಡಿ) ಸಚಿವಾಲಯ ಮುಂದಾಗಿದೆ. ಈ ಕುರಿತ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಕೇಂದ್ರ ಸಂಪುಟದ ಮುಂದೆ ಮಂಡಿಸಲು ಸಿದ್ಧತೆ ನಡೆಸಿದೆ.
ಪ್ರಸ್ತುತ ದೇಶಾದ್ಯಂತ ಕೇಂದ್ರೀಯ ಹಾಗೂ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟಾರೆ 31 ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗಳು ಇವೆ. ತಮ್ಮದೇ ಪರೀಕ್ಷಾ ವಿಧಾನ ಮತ್ತು ಮೌಲ್ಯಮಾಪನವನ್ನು ಇವು ನಡೆಸುತ್ತವೆ. ಹೀಗಾಗಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನತೆ ಇದೆ. ಇದರಿಂದ 10 ಮತ್ತು 12ನೇ ವಿದ್ಯಾರ್ಥಿಗಳ ಅಂಕ ಗಳಿಕೆಯಲ್ಲೂ ಏರುಪೇರು ಇರುತ್ತದೆ. ಇದನ್ನು ಸರಿಪಡಿಸಿ ಏಕರೂಪತೆ ತರಲು ನ್ಯಾಕ್ ರಚನೆಯ ಪ್ರಸ್ತಾವನೆಯನ್ನು ಎಚ್ಆರ್ಡಿ ಸಚಿವಾಲಯ ಮಾಡಿದೆ. ಭಿನ್ನತೆಯನ್ನು ಹೋಗಲಾಡಿಸಲು ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆ, ಮೌಲ್ಯಮಾಪನ ಮತ್ತು ಮಂಡಳಿಗಳ ಮಧ್ಯೆ ಸಾಮರಸ್ಯಕ್ಕೆ ನ್ಯಾಕ್ ಸಲಹೆ ನೀಡಲಿದೆ. ಈ ಮೂಲಕ ಮಂಡಳಿಗಳಲ್ಲಿ ಅತ್ಯುತ್ತಮ ಕ್ರಮಗಳ ಅನುಸರಣೆಗೆ ಸೇತು ಆಗಲಿದೆ. ಇದರಿಂದ ವಿದ್ಯಾರ್ಥಿಗಳ ಅಂಕಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸ ಆಗುವುದಿಲ್ಲ ಮತ್ತು ಮಂಡಳಿಗಳ ಮಧ್ಯೆ ಸ್ಪರ್ಧಾತ್ಮಕತೆ ಬೆಳೆಯುತ್ತದೆ ಎಂದು ಸಚಿವಾಲಯ ಹೇಳಿದೆ.
ನ್ಯಾಕ್ ರಚನೆಯ ಉದ್ದೇಶ, ಅದರ ಸಾಧಕ-ಬಾಧಕಗಳನ್ನು ಸಚಿವಾಲಯ ಈಗಾಗಲೇ ಪ್ರಧಾನಿ ಕಾರ್ಯಾಲಕ್ಕೆ ವಿವರಿಸಿದ್ದು, ಈ ಪ್ರಸ್ತಾವನೆ ಕುರಿತ ಅಭಿಪ್ರಾಯ ತಿಳಿಸುವಂತೆ ರಾಷ್ಟ್ರೀಯ ಶೈಕ್ಷಣ ಸಂಶೋಧನಾ ಮತ್ತು ತರಬೇತಿ ಮಂಡಳಿಗೂ (ಎನ್ಸಿಇಆರ್ಟಿ) ಪತ್ರ ಬರೆದಿದೆ.