

ದೊಡ್ಡ ಆಘಾತ ನೀಡಿದ ಸೋದರನ ಪರಾಜಯ
ಮಹತ್ವದ ಘಟ್ಟದಲ್ಲಿ ದೊಡ್ಡ ಹೊಡೆತ
ಗಂಗಾಧರ್ ಬೈರಾಪಟ್ಟಣ ರಾಮನಗರ
ಚುನಾವಣೆ ಎಂದರೆ ಸೋಲು-ಗೆಲುವು ಸಾಮಾನ್ಯ. ಆದರೆ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಗ್ರಾಮಾಂತರದಲ್ಲಿ ಸಹೋದರ ಡಿ.ಕೆ.ಸುರೇಶ್ ಸೋಲು ದೊಡ್ಡ ಆಘಾತವನ್ನೇ ನೀಡಿದೆ.
ರಾಜಕೀಯ ಹೋರಾಟದುದ್ದಕ್ಕೂ ಸಹೋದರನ ಬಲದಿಂದಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಹುದ್ದೆವರೆಗೂ ಏರಿರುವ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲು ಇನ್ನು ಒಂದೇ ಮೆಟ್ಟಿಲು ಬಾಕಿ ಇದೆ. ಇಂತಹ ಸಂದರ್ಭದಲ್ಲಿಯೇ ಸಹೋದರನ ಸೋಲು ಅರಗಿಸಿಕೊಳ್ಳಲಾಗದಂತೆ ಮಾಡಿದೆ.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಯತ್ನದಲ್ಲಿ ಇದ್ದಾರೆ. ಪಕ್ಷಕ್ಕೆ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ಜತೆಗೆ ಬೆಂಬಲಕ್ಕೆ ನಿಲ್ಲುವ ಸಹೋದರ ಸುರೇಶ್ ಗೆಲುವಿನ ಅನಿವಾರ್ಯತೆ ಇತ್ತು. ಈ ಮೂಲಕ ಮುಖ್ಯಮಂತ್ರಿ ಸ್ಥಾನದ ಮೇಲೆ ಹಕ್ಕನ್ನು ಪ್ರಬಲವಾಗಿ ಮಂಡಿಸುವ ಶಕ್ತಿ ಬರುತ್ತಿತ್ತು. ಆದರೆ, ಎಲ್ಲ ನಡೆಯಲ್ಲೂ ಸಹೋದರ ನೆರಳನ್ನು ಆಶ್ರಯಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮುಖ ಘಟ್ಟದಲ್ಲಿ ಭಾರಿ ಹೊಡೆತ ಬಿದ್ದಿದೆ. ಈ ಮೂಲಕ ಎದುರಾಳಿಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಡಿ.ಕೆ.ಶಿ. ಕೊಂಚ ಮಟ್ಟಿಗೆ ಕಳೆದುಕೊಂಡಂತೆ ಆಗಿದೆ.
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಚುನಾವಣಾ ಕಣದಲ್ಲಿ ಸೋಲು ಕಂಡಿದ್ದೇ ಅಪರೂಪ. 1983ರಲ್ಲಿ ಮೊದಲ ಯತ್ನದಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸೋಲು ಕಂಡಿದ್ದ ಡಿ. ಕೆ.ಶಿವಕುಮಾರ್ 2002ವರೆಗೂ ಸೋಲಿನ ರುಚಿ ಉಂಡಿರಲಿಲ್ಲ.
ಎಸ್. ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಮಂತ್ರಿ ಆಗಿದ್ದ ವೇಳೆ ಕನಕಪುರ ಕ್ಷೇತ್ರದಲ್ಲಿ ಎದುರಾದ ಲೋಕಸಭೆ ಉಪಚುನಾವಣೆಯಲ್ಲಿ ಮತ್ತೆ ದೇವೇಗೌಡರ ಎದುರೇ ಪ್ರಬಲ ಪೈಪೋಟಿ ನೀಡಿ ಸೋತರು. ಇದು ಡಿ.ಕೆ.ಶಿವಕುಮಾರ್ ರಾಜಕೀಯ ಶಕ್ತಿಯನ್ನು ಹೆಚ್ಚಿಸಿತು. ಆದರೆ, ಕಳೆದ 11 ವರ್ಷಗಳಿಂದಲೂ ಕ್ಷೇತ್ರದಲ್ಲಿಯೇ ಸಕ್ರಿಯವಾಗಿದ್ದ ಡಿ.ಕೆ.ಸುರೇಶ್‌ಗೆ, ಇದು ಮೊದಲ ಸೋಲು. ಇದರೊಂದಿಗೆ ದೇವೇಗೌಡ - ಡಿ.ಕೆ.ಶಿ ಕುಟುಂಬದ ನಡುವಿನ ಹೋರಾಟದಲ್ಲಿ ಡಿ.ಕೆ.ಸಹೋದರರು ಕಂಡ ಮೂರನೇ ಸೋಲಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ಸೋಲುಂಡಿದ್ದರೂ ಮತ್ತೊಮ್ಮೆ ಅದೃಷ್ಟ ಪರೀಕ್ಷೆಯನ್ನು ಚನ್ನಪಟ್ಟಣದ ಮೂಲಕ ಮಾಡಲು ಸಿದ್ಧವಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಎಚ್.ಡಿ.ಕುಮಾರಸ್ವಾಮಿ ಮಂಡ್ಯದಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕಿದೆ. ಇದರಿಂದ ಎದುರಾಗುವ ಉಪಚುನಾವಣೆಯಲ್ಲಿ ಡಿ.ಕೆ.ಸುರೇಶ್ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಲೋಕಸಭೆ ಸಮರದಲ್ಲಿ ಕಾಂಗ್ರೆಸಿಗರೂ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮತಗಳು ಪಕ್ಷಕ್ಕೆ ಸಂದಾಯವಾಗಿರುವುದು ಡಿ.ಕೆ.ಸುರೇಶ್ ಸ್ಪರ್ಧೆ ಸಾಧ್ಯತೆ ಹೆಚ್ಚಿಸಿದೆ.
ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್ ಪ್ರಬಲ ಎದುರಾಳಿ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದ ಡಿ.ಕೆ. ಸಹೋದರರು ಇದನ್ನು ಎದುರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಿದರು. ಆದರೆ, ಸ್ವ-ಕ್ಷೇತ್ರ ಕನಕಪುರದಲ್ಲಿ ಮತದಾರರು ಅನಿರೀಕ್ಷಿತ ಆಘಾತ ನೀಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಎರಡೂ ಪಕ್ಷಗಳು ಡಿ.ಕೆ.ಶಿವಕುಮಾರ್ ಎದುರು ಠೇವಣಿ ನಷ್ಟ ಮಾಡಿಕೊಂಡಿದ್ದರು. ಡಿ.ಕೆ.ಶಿವಕುಮಾರ್ 1.22 ಲಕ್ಷ ಮತಗಳ ಅಂತರದ ದಾಖಲೆ ಗೆಲುವು ಕಂಡಿದ್ದರು. ಆದರೆ, ಲೋಕಸಭೆ ಚುನಾವಣೆಯಲ್ಲಿ ಇದಕ್ಕೆ ವಿರುದ್ಧವಾದ ಮತಗಳನ್ನು ನೀಡಿರುವ ಕನಕಪುರ ಕ್ಷೇತ್ರದ ಜನತೆ ಮಂಜುನಾಥ್ ಪರವಾಗಿ 83303 ಮತಗಳನ್ನು ನೀಡಿದ್ದರೆ ಡಿ.ಕೆ.ಸುರೇಶ್‌ಗೆ 108980 ಮತಗಳನ್ನು ನೀಡಿದ್ದು, ಕೇವಲ 25677 ಮತಗಳ ಮುನ್ನಡೆ ನೀಡುವ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.