

ನವದೆಹಲಿ: ಆಂತರಿಕ ಕಲಹ ಮುಂದುವರಿದಿರುವ ಸುಡಾನ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಪೈಕಿ ಇದುವರೆಗೆ 1,100 ಜನರನ್ನು ಭಾರತೀಯ ನೌಕಾಪಡೆಯ ಹಡಗುಗಳ ಮೂಲಕ ಪಾರು ಮಾಡಲಾಗಿದೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಗುರುವಾರ ತಿಳಿಸಿದ್ದಾರೆ. ‘ಆಪರೇಷನ್ ಕಾವೇರಿ’ ಕಾರ್ಯಾಚರಣೆಯ ಭಾಗವಾಗಿ ಐಎನ್ಎಸ್ ಸುಮೇಧಾ ಮತ್ತು ತೇಜ್ ನೌಕೆಗಳು, ರಕ್ಷಣೆ ಮಾಡಲಾದ ಭಾರತೀಯರನ್ನು ಆರು ಬ್ಯಾಚ್ಗಳಲ್ಲಿ ಸೌದಿ ಅರೇಬಿಯಯಾದ ಜೆಡ್ಡಾ ಬಂದರಿಗೆ ಕರೆ ತಂದಿದೆ. ಇನ್ನೂ 297 ಜನರನ್ನು ಕರೆತರಲಾಗಿದ್ದು ಸುರಕ್ಷಿತವಾಗಿ ಆಗಮಿಸಿದ ಭಾರತೀಯರ ಸಂಖ್ಯೆ 1,100ಕ್ಕೇರಿದೆ ಎಂದು ಮುರಳೀಧರನ್ ಟ್ವೀಟ್ ಮಾಡಿದ್ದಾರೆ. ಐಎನ್ಎಸ್ ತರ್ಕಶ್ ಎಂಬ ನೌಕೆ ‘ಆಪರೇಷನ್ ಕಾವೇರಿ’ಗೆ ಗುರುವಾರ ಹೊಸದಾಗಿ ಸೇರಿಕೊಂಡಿದೆ.
ಪ್ರಕ್ಷುಬ್ಧ ಪರಿಸ್ಥಿತಿ: ಸುಡಾನ್ನಲ್ಲಿ ಅಧಿಕಾರಕ್ಕಾಗಿ ಸೇನೆ ಮತ್ತು ಅರೆಸೇನಾ ಪಡೆ ಆರ್ಎಸ್ಎಫ್ನ ನಡುವೆ ನಡೆಯುತ್ತಿರುವ ಕಾಳಗ ತೀವ್ರಗೊಂಡಿದ್ದು ಭದ್ರತಾ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವತ್ರಾ ಗುರುವಾರ ಹೇಳಿದ್ದಾರೆ. ಭಾರತೀಯರನ್ನು ಸಂಘರ್ಷ ವಲಯಗಳಿಂದ ಸುರಕ್ಷಿತವಾಗಿ ಹೊರ ತರುವುದಕ್ಕೆ ಗಮನ ಕೇಂದ್ರೀಕರಿಸಿ ಸುಡಾನ್ನಲ್ಲಿನ ಸಂಬಂಧಪಟ್ಟ ಎಲ್ಲರೊಂದಿಗೆ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಭಾರತೀಯರನ್ನು ಮೊದಲು ಸಂಘರ್ಷದ ಸ್ಥಳಗಳಿಂದ ಸುರಕ್ಷಿತವಾಗಿ ಹೊರತಂದು ನಂತರ ಸ್ವದೇಶಕ್ಕೆ ಕರೆ ತರಲಾಗುತ್ತದೆ ಎಂದು ಕ್ವತ್ರಾ ವಿವರಿಸಿದರು. ರಕ್ಷಿಸಲಾದ 360 ಜನರನ್ನು ಈಗಾಗಲೇ ಭಾರತಕ್ಕೆ ಕರೆ ತರಲಾಗಿದ್ದು ಶೀಘ್ರವೇ 246 ಜನರ ಇನ್ನೊಂದು ತಂಡ ಬರಲಿದೆ ಎಂದು ತಿಳಿಸಿದರು.
ಸುಡಾನ್ನಲ್ಲಿರುವ ಸುಮಾರು 3,400 ಭಾರತೀಯ ಪ್ರಜೆಗಳು ರಕ್ಷಣೆಗಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಅಥವಾ ಖಾರ್ಟೂಮ್ಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಂಪರ್ಕದಲ್ಲಿದ್ದಾರೆ. ಇದುವರೆಗೆ 1,700ಕ್ಕೂ ಅಧಿಕ ಜನರನ್ನು ಸಂಘರ್ಷದ ಸ್ಥಳಗಳಿಂದ ಪಾರು ಮಾಡಲಾಗಿದೆ.
ಸುಡಾನ್ನಿಂದ ಭಾರತೀಯರನ್ನು ಕರೆ ತರಲು ನೌಕಾ ಪಡೆಯ ಇನ್ನೊಂದು ಹಡಗನ್ನು ಭಾರತ ನಿಯೋಜಿಸಿದೆ. ಸ್ವದೇಶೀಯರನ್ನು ಕರೆ ತರುವ ಕಾರ್ಯಾಚರಣೆಯಲ್ಲಿ ಐಎನ್ಎಸ್ ಸುಮೇಧಾ ಮತ್ತು ತೇಜ್ ಜೊತೆ ಐಎನ್ಎಸ್ ತರ್ಕಶ್ ಸೇರಿಕೊಂಡಿದೆ. ‘ತರ್ಕಶ್’ ಕೂಡ ಗುರುವಾರ ಪೋರ್ಟ್ ಸುಡಾನ್ ತಲುಪಿದೆ ಎಂದು ಕ್ವತ್ರಾ ತಿಳಿಸಿದರು. ಸುಡಾನ್ನಲ್ಲಿರುವ ಪ್ರತಿ ಭಾರತೀಯರನ್ನು ಸಾಧ್ಯವಾದಷ್ಟು ಬೇಗ ಸುರಕ್ಷಿತವಾಗಿ ಕರೆ ತರುವುದು ಸರ್ಕಾರದ ಗುರಿಯಾಗಿದೆ ಎಂದರು.