ಎತ್ತಿನಹೊಳೆ ಯೋಜನೆಯಡಿ ನೀರು, ಬೆಟ್ಟ ಅಗೆದು ಇಲಿ ಹಿಡಿದಂತೆ ವರ್ತಿಸಿದ ಸರ್ಕಾರ

1
Published on

ಚಿಕ್ಕಬಳ್ಳಾಪುರ: ಹಾಸನದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದ್ದು ಹಠ ಹಿಡಿದು ಬೆಟ್ಟ ಅಗೆದು ಇಲಿ ಹಿಡಿದಂತೆ ಸರ್ಕಾರ ವರ್ತಿಸುತ್ತಿದೆ ಎಂದು ಆರೋಪಿಸಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ 21 ನೇ ಶತಮಾನ ಕಂಡ ಬಹು ದೊಡ್ಡ ಮೋಸದ ಎತ್ತಿನಹೊಳೆ ಯೋಜನೆಯಡಿ ನೀರು ಹರಿಸುವುದಕ್ಕೆ ಚಾಲನೆ ನೀಡಿದ್ದಾರೆ. ಸರ್ಕಾರದಿಂದ ಅನುಮೋದಿಸಲ್ಪಟ್ಟ ಮೂಲ ವಿಸ್ತೃತ ಯೋಜನಾ ವರದಿಯಯಂತೆ ಪೂರ್ವಾಭಿಮುಖವಾಗಿ ಹರಿಯಬೇಕಿದ್ದ ಎತ್ತಿನಹೊಳೆಯನ್ನು ಉದ್ದೇಶಿತ ಮೂಲ ಪಥವನ್ನೇ ಬದಲಿಸಿ, ವೇದಾವತಿ ವ್ಯಾಲಿ ಮೂಲಕ ವಾಣಿ ವಿಲಾಸಸಾಗರಕ್ಕೆ ಹರಿಸಲಾಗುತ್ತದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ಎತ್ತಿನಹೊಳೆಯಿಂದ ಎರಡ್ಮೂರು ವರ್ಷದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ಶುದ್ಧ ಕುಡಿಯುವ ನೀರು ಹರಿಸುತ್ತೇವೆಂದು ಪುಂಖಾನುಪುಂಖವಾಗಿ ಭಾಷಣಗಳನ್ನು ಬಿಗಿದ ರಾಜಕಾರಣಿಗಳು ಈಗ ಎಲ್ಲಿದ್ದಾರೆ? ಯಾವ ಬಿಲ ಸೇರಿದ್ದಾರೆ? ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ ಪ್ರಶ್ನಿಸಿದ್ದಾರೆ.

*ವೈಜ್ಞಾನಿಕ ವರದಿ ನಿರಾಕರಣೆ

ಕೇಂದ್ರೀಯ ಜಲ ಆಯೋಗ ವರದಿಯ ಪ್ರಕಾರ ಎತ್ತಿನಹೊಳೆ ಯೋಜನೆಯಡಿ 24 ಟಿಎಂಸಿ ನೀರು ಲಭ್ಯವಾಗುವುದಿಲ್ಲ ಎಂದು 2012 ರಲ್ಲಿಯೇ ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿತ್ತು. ಇದನ್ನೇ 2015 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯು ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ಸಂಸ್ಥೆ ಒತ್ತಿ ಹೇಳಿದ್ದು ಇಂತಹ ವೈಜ್ಞಾನಿಕ ಸಂಸ್ಥೆಗಳನ್ನು ಪರಿಗಣಿಸದೇ ಸಾವಿರಾರು ಕೋಟಿ ರೂ ಖರ್ಚು ಮಾಡಿದ ನಂತರ ಸರ್ಕಾರವೇ ನೇಮಿಸಿದ್ದ ಟೆಲಿಮೆಟ್ರಿಕ್ ಮಾಪನಾ ವರದಿಯಲ್ಲಿ 2023 ರ ಮಳೆಗಾಲದ ಎತ್ತಿನಹೊಳೆ ಯೋಜನೆಯ ನೀರು ಲಭ್ಯತೆ ಕೇವಲ ೮.೫ ಟಿಎಂಸಿ ಮಾತ್ರ ಎಂದು ಹೇಳಿದೆ. ಆದರೂ ಬಯಲುಸೀಮೆ ಎಲ್ಲ ಜಿಲ್ಲೆಗಳಿಗೆ ನೀರು ಹರಿಸುವುದಾಗಿ ಯಾವ ನೈತಿಕತೆ ಇಟ್ಟುಕೊಂಡು ಮುಖ್ಯಮಂತ್ರಿ ಹೇಳುತ್ತಿದ್ದಾರೆ ಎಂದು ಹೋರಾಟಗಾರರು ಪ್ರಶ್ನಿಸಿದ್ದಾರೆ. ಕಳೆದ 15 ವರ್ಷಗಳಿಂದ 24 ಟಿಎಂಸಿ ನೀರು ಲಭ್ಯವಾಗುತ್ತದೆ ಎಂಬ ಕಾಲ್ಪನಿಕ ಸಂಖ್ಯೆಯನ್ನು ಇಟ್ಟುಕೊಂಡು ಜಿಲ್ಲಾವಾರು ನೀರಿನ ಹಂಚಿಕೆ ಮಾಡಲಾಗಿದೆ. ಆದರೆ, ಕಟ್ಟ ಕಡೇಯ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ನೀರು ತಲುಪುವುದು ಅಸಾಧ್ಯವಾಗಿದೆ. ಒಂದು ವೇಳೆ ಬದ್ಧತೆ ಇದ್ದಲ್ಲಿ ಈ ಯೋಜನೆಯಡಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಕೆರೆಗೆ ನೀರು ಹರಿಸಬೇಕಾಗಿತ್ತು ಎಂದು ತಿಳಿಸಿದ್ದಾರೆ.

*ಎತ್ತಿನಹೊಳೆ ಯೋಜನೆ

ಎತ್ತಿನಹೊಳೆ ಯೋಜನೆಯಡಿ ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ 38 ಪಟ್ಟಣಗಳ, 6,657 ಗ್ರಾಮಗಳ 75 ಲಕ್ಷ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಮತ್ತು 527 ಕೆರೆಗಳನ್ನು ತುಂಬಿಸಿ ಅಂತರ್ಜಲ ಮರುಪೂರಣದ ಉದ್ದೇಶ ಹೊಂದಿದ್ದು ಆರಂಭಿಕ ಯೋಜನಾ ವೆಚ್ಚ 8,323 ಕೋಟಿ ರೂ. ಬಳಿಕ 12,912 ಕೋಟಿ ರೂ, 2023 ರಲ್ಲಿ 23,251 ಕೋಟಿ ರೂಗಳಿಗೆ ಏರಿಕೆಯಾಗಿದೆ. ಒಂದೆಡೆ ಸರ್ಕಾರವು 24 ಟಿಎಂಸಿ ನೀರು ಲಭ್ಯತೆಯ ಬಗ್ಗೆ ಹೇಳುತ್ತಿದ್ದರೆ, ಹೋರಾಟಗಾರರು ನಿರೀಕ್ಷೆಗೆ ಅನುಗುಣವಾಗಿ ನೀರು ಸಿಗುವುದಿಲ್ಲ ಎಂದು ವಾದಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net