

ಬೆಂಗಳೂರು: ಕೋವಿಡ್ ಅಕ್ರಮ ಆರೋಪಗಳ ಬಗ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಳಿ ದಾಖಲೆಯಿದ್ದರೆ ಪಡೆದು ಕಾಂಗ್ರೆಸ್ ಸರ್ಕಾರ ತನಿಖೆ ನಡೆಸಲಿ. ಆದರೆ ಕಾಂಗ್ರೆಸ್‌ನವರು ಅಧಿಕಾರ ಬಳಸಿಕೊಂಡು ದಂಡ ಪ್ರಯೋಗದ ಮೂಲಕ ಪಕ್ಷದ ಕಾರ್ಯಕರ್ತರನ್ನು ಕಟ್ಟಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಬೆಂಗಳೂರು ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ನೇಮಕ ಸಂಬಂಧ ಸಭೆ ಬಳಿ ಸುದ್ದುಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿಯಲ್ಲಿ ಈಗ ಹೊಸ ತಂಡ ಬಂದಿದೆ. ಸರ್ಕಾರ ಎಡವಿದ್ದೆಲ್ಲಿ ? ಎಂದು ಜನರ ಮುಂದಿಡುತ್ತೇವೆ. ಅಧಿಕಾರದ ದಂಡದಿಂದ ನಮ್ಮನ್ನು ಹೆದರಿಸಲು ಯಾರಿಗೂ ಸಾಧ್ಯವಿಲ್ಲ. ಅಂತಹ ಕೆಲಸಕ್ಕೆ ಮುಂದಾದರೆ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಹಲವು ತಪ್ಪುಗಳಿಂದ ಪಾಠ ಕಲಿತು ಗಟ್ಟಿಯಾಗಿದ್ದೇವೆ, ಪಕ್ಷವೂ ಇನ್ನಷ್ಟು ಸದೃಢವಾಗಿದೆ. ರಾಜ್ಯಾದ್ಯಂತ ಪಕ್ಷದ ಸಂಘಟನಾ ಪ್ರಕ್ರಿಯೆ ವೇಗವಾಗಿ ಸಾಗಿದೆ. ಪರಸ್ಪರ ಮಾತುಕತೆ, ವಿಚಾರ-ವಿನಿಮಯದಿಂದ ವಾಸ್ತವಾಂಶ ತಿಳಿದುಕೊಂಡು ತೀರ್ಮಾನಿಸಲಾಗುತ್ತದೆ ಎಂದರು.
ಸಂಘಟನೆ ಬಲಪಡಿಸುವ ಕೆಲಸದಲ್ಲಿ ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು ಸೇರಿ ಹಿರಿಯ ನಾಯಕರ ಅಭಿಪ್ರಾಯಗಳನ್ನು ಪಡೆದು ಮುನ್ನಡೆಯಲು ನಿರ್ಧರಿಸಿದ್ದು, ಪಕ್ಷದ ವರಿಷ್ಠರು ಕೂಡ ರಾಜ್ಯ ಸಮಿತಿ ಒತ್ತಡ, ಅಭಿಪ್ರಾಯಗಳಿಗೆ ಮನ್ನಣೆ ನೀಡುವ ವಿಶ್ವಾಸವಿದೆ ಎಂದರು.
ಪಕ್ಷದ ರಾಜ್ಯ ಸಮಿತಿಗೆ ಪದಾಧಿಕಾರಿಗಳ ನೇಮಕ ಸಂದರ್ಭದಲ್ಲಿ ಕೆಲವರು ಅಭಿಪ್ರಾಯ ಪಡೆದು, ಪಟ್ಟಿಯನ್ನು ತ್ವರಿತವಾಗಿ ಕಳುಹಿಸಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ, ಸೂಚನೆ ನೀಡುವುದು ನಮ್ಮ ಜವಾಬ್ದಾರಿಯಾಗಿದ್ದು, ಮುಂದಿನದು ವರಿಷ್ಠರ ವಿವೇಚನೆಗೆ ಬಿಟ್ಟದ್ದು ಎಂದು ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿಚಾರವನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ. ಅವರ ವಿರುದ್ಧ ಪಕ್ಷದ ಕೇಂದ್ರ ಸಮಿತಿಯೇ ಕ್ರಮವಹಿಸಬೇಕು. ರಾಜ್ಯ ಸಮಿತಿಗೆ ಅಂತಹ ಅಧಿಕಾರವಿಲ್ಲ ಎಂದು ಹೇಳಿದರು.