

ಜೈಪುರ: ತನ್ನ ಪ್ರೇಯಸಿಯನ್ನು ಮದುವೆ ಆಗಲು ಶಿಕ್ಷಕಿಯೊಬ್ಬಳು ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗಿರುವ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಈಗ ಆರವ್ ಕುಂತಲ್ ಎಂದು ಕರೆಯಲ್ಪಡುವ ಶಿಕ್ಷಕನು ತನ್ನ ವಿದ್ಯಾರ್ಥಿನಿ ಕಲ್ಪನಾಳನ್ನು ಇತ್ತೀಚೆಗೆ ವಿವಾಹವಾದರು. ಅವರ ಮದುವೆಯು ಅಸಾಂಪ್ರದಾಯಿಕವಾಗಿದ್ದರೂ ಅವರ ಪೋಷಕರು ಪೂರ್ಣ ಹೃದಯದಿಂದ ಮದುವೆ ಒಪ್ಪಿಕೊಂಡಿದ್ದಾರೆ.
ಅರವ್ನನ್ನು ಈ ಮುಂಚೆ ಮೀರಾ ಎಂದು ಕರೆಯಲಾಗುತ್ತಿತ್ತು. ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ಶಾಲೆಯಲ್ಲಿ ಕಲ್ಪನಾ ವಿದ್ಯಾರ್ಥಿಯಾಗಿದ್ದಳು. 2016ರಲ್ಲಿ ಮೀರಾ (ಅರವ್) ಮತ್ತು ಕಲ್ಪನಾ ನಡುವೆ ಸ್ನೇಹ ಆರಂಭವಾಯಿತು. ಎರಡು ವರ್ಷಗಳವರೆಗೆ ಇಬ್ಬರು ಫ್ರೆಂಡ್ಸ್ ಆಗಿಯೇ ಇದ್ದರು. ಆದರೆ, 2018ರಲ್ಲಿ ಮೀರಾ ಕಲ್ಪನಾಗೆ ಮದುವೆ ಪ್ರಸ್ತಾಪ ಮಾಡಿದಳು. ಇದಕ್ಕೆ ಕಲ್ಪನಾ ಸಹ ಒಪ್ಪಿಕೊಂಡಳು. ಆದರೆ, ಆರಂಭದಲ್ಲಿ ಇಬ್ಬರು ಪಾಲಕರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದಾದ ಬಳಿಕ ಮೀರಾ ತಲೆಗೆ ಬಂದಿದ್ದೇ ಲಿಂಗ ಪರಿವರ್ತನೆಯ ಆಲೋಚನೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಮೀರಾ, ಬಾಲ್ಯದಿಂದಲೂ ನನ್ನನ್ನು ನಾನು ಯಾವಾಗಲೂ ಹುಡುಗನಂತೆ ಭಾವಿಸುತ್ತೇನೆ. ಹೀಗಾಗಿ ಈ ನಿರ್ಧಾರ ಸಹಜ ಎನಿಸಿತು ಎಂದಿದ್ದಾರೆ.
2019 ರಿಂದ ಪ್ರಾರಂಭವಾಗುವ ಶಸ್ತ್ರಚಿಕಿತ್ಸೆಗಳ ಸರಣಿಯ ಮೂಲಕ ಮೀರಾ ತನ್ನ ಲಿಂಗವನ್ನು ಬದಲಾಯಿಸಿಕೊಂಡಿದ್ದಾರೆ. 2021 ರಲ್ಲಿ ತನ್ನ ಅಂತಿಮ ಶಸ್ತ್ರಚಿಕಿತ್ಸೆಯೊಂದಿಗೆ ಇದೀಗ ತನ್ನ ಪ್ರೇಯಸಿಯನ್ನು ಮದುವೆಯಾಗಿದ್ದಾರೆ. (ಏಜೆನ್ಸೀಸ್)