

ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ಹೊರರಾಜ್ಯದಿಂದ ಖದೀಮರನ್ನು ಕರೆತಂದು ದೊಡ್ಡಪ್ಪನ ಮನೆಯಲ್ಲಿ ದರೋಡೆ ಮಾಡಿಸಿದ್ದ ಪ್ರಕರಣ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಕೃತ್ಯ ಎಸಗಿದ ಗ್ಯಾಂಗ್ನ 6 ಮಂದಿಯನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ರಾಜಸ್ಥಾನ ಮೂಲದ ವಿಜಯ್ರಾಜ್ ಚೌಹಾಣ್ (46), ಉತ್ತಮ್ ಸಿಂಗ್ (50), ಅಮರ್ ಸಿಂಗ್ (25), ಕರಣ್ಸಿಂಗ್ (19) ಹಾಗೂ ಅಮ್ಜದ್ (39) ಬಂಧಿತರು. ಆರೋಪಿಗಳಿಂದ 74.47 ಲಕ್ಷ ರೂ. ಮೌಲ್ಯದ 1 ಕೆಜಿ 232 ಗ್ರಾಂ ಚಿನ್ನಾಭರಣ, 21.50 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಸೆಪಟ್ ಕಟೋಚ್ ತಿಳಿಸಿದ್ದಾರೆ.
ರಾಜಸ್ಥಾನ ಮೂಲದವರಾದ ಜವಾರಿಲಾಲ್ ಎಂಬುವರು ಕುಟುಂಬದ ಜತೆ ಬನಶಂಕರಿ 1ನೇ ಹಂತದ ನೆಲೆಸಿದ್ದು, ಎಲೆಕ್ಟ್ರಿಕ್ಉಪಕರಣ ಮಾರಾಟ ಮಳಿಗೆಯನ್ನು ತೆರೆದಿದ್ದಾರೆ. ಅಂಗಡಿಯಲ್ಲಿ ಸತ್ಯನಾರಾಯಣ ಎಂಬಾತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಈತನ ಸಹೋದರನ ಪುತ್ರ ವಿಜಯ್ರಾಜ್ ಚೌಹಾಣ್, ಅದೇ ಏರಿಯಾದಲ್ಲಿ ಎಲೆಕ್ಟ್ರಿಕ್ ಅಂಗಡಿ ಇಟ್ಟುಕೊಂಡಿದ್ದಾನೆ. ಕೆಲ ತಿಂಗಳ ಹಿಂದೆ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಜಯರಾಜ್ ಮತ್ತು ಈತನ ದೊಡ್ಡಪ್ಪ ಜವಾರಿಲಾಲ್ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರಕ್ಕೆ ವಿಜಯ್ರಾಜ್ ದ್ವೇಷ ಇಟ್ಟುಕೊಂಡಿದ್ದ.
ಮದುವೆ ಹೋದಾಗ ದರೋಡೆ: ದೊಡ್ಡಪ್ಪನ ಮೇಲೆ ಸೇಡು ತೀರಿಸಿಕೊಳ್ಳಬೇಕು, ಆತನಿಗೆ ವ್ಯವಹಾರದಲ್ಲಿ ನಷ್ಟ ಅನುಭವಿಸುವಂತೆ ಮಾಡಬೇಕು ಎಂದು ಯೋಚಿಸಿದ್ದ ವಿಜಯ್ರಾಜ್, ರಾಜಸ್ಥಾನದ ಉತ್ತಮ್ ಸಿಂಗ್ ಎಂಬಾತನ ಸಂರ್ಪಸಿ ದರೋಡೆ ಬಗ್ಗೆ ತಿಳಿಸಿದ್ದ.
ಕೆ.ಜಿ.ಗಟ್ಟಲೆ ಚಿನ್ನಾಭರಣ ಹಾಗೂ ಲಕ್ಷಾಂತರ ರೂ. ಸಿಗುತ್ತದೆ ಎಂದು ಹೇಳಿ ರಾಜಸ್ಥಾನದಿಂದ ಉತ್ತಮ್ ಸಿಂಗ್ ಮತ್ತವನ ಸಹಚರರನ್ನು ಕರೆಸಿಕೊಂಡು ಲಾಡ್ಜ್ನಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದ.
1 ತಿಂಗಳ ಸ್ಕೆಚ್: ಜವಾರಿಲಾಲ್ ಮನೆಯಲ್ಲಿ ದರೋಡೆ ಮಾಡಲು 1 ತಿಂಗಳಿಂದ ಸಂಚು ರೂಪಿಸಿಕೊಂಡಿದ್ದರು. ಜವಾರಿಲಾಲ್ ಮತ್ತು ಆತನ ಕುಟುಂಬಸ್ಥರು ಯಾವಾಗಲೂ ಮನೆಯಲ್ಲೇ ಇರುತ್ತಿದ್ದರಿಂದ ಕೃತ್ಯ ಕೈಗೂಡಿರಲಿಲ್ಲ. ಆದರೆ, ಸಂಬಂಧಿಕರೊಬ್ಬರ ಮದುವೆ ಹಿನ್ನೆಲೆಯಲ್ಲಿ ಕುಟುಂಬ ಸಮೇತ ರಾಜಸ್ಥಾನಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಸತ್ಯನಾರಾಯಣ ಎಂಬ ಕೆಲಸದಾತ ಮಾತ್ರ ಇದ್ದ. ಇದನ್ನು ತಿಳಿದುಕೊಂಡಿದ್ದ ವಿಜಯ್ರಾಜ್, ಖದೀಮರಿಗೆ ಮಾಹಿತಿ ಮುಟ್ಟಿಸಿದ್ದ. ಜ.29ರ ಮಧ್ಯರಾತ್ರಿ 12 ಗಂಟೆಯಲ್ಲಿ ಮನೆಯ ಮಹಡಿಬಾಗಿಲು ಒಡೆದು ಒಳ ನುಗ್ಗಿದ್ದಾರೆ. ಮನೆಯಲ್ಲಿ ಮಲಗಿದ್ದ ಸತ್ಯನಾರಾಯಣ ಕೈಕಾಲು ಕಟ್ಟಿಹಾಕಿ ದರೋಡೆ ಮಾಡಿದ್ದಾರೆ.
ಸಿಸಿ ಕ್ಯಾಮರಾ ನೀಡಿದ ಸುಳಿವು
ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ಬ್ಯಾಗ್ ಸಮೇತ ಪರಾರಿಯಾಗುತ್ತಿರುವ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ದ್ವಿಚಕ್ರ ವಾಹನಗಳಲ್ಲಿ ಬಂದು ಕೃತ್ಯ ಎಸಗಿರುವುದು ಕಂಡುಬಂದಿತ್ತು. ಸಂಚು ರೂಪಿಸಿ ದರೋಡೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರಾದಲ್ಲಿನ ಹಳೇ ದೃಶ್ಯಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ವಿಜಯ್ರಾಜ್, ಅಪರಿಚಿತನ ಜತೆ ಜವಾರಿಲಾಲ್ ಮನೆ ಬಳಿ ಹೋಗಿರುವ ಸುಳಿವು ಸಿಕ್ಕಿತ್ತು. ಆತನ ಫೋನ್ ಕರೆಗಳ ಜಾಡು ಹಿಡಿದು ತನಿಖೆ ಮುಂದುವರಿಸಿದಾಗ ಕೃತ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.