

ಜಮ್ಮು: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ರಸ್ತೆ ಬದಿ ಕಂಡುಬಂದ ವಾರಸುದಾರರಿಲ್ಲದ ಸೂಟ್ಕೇಸ್ ಬುಧವಾರ ಸ್ಥಳೀಯವಾಗಿ ಬಾಂಬ್ ಭೀತಿಯನ್ನು ಹರಡಿತ್ತು. ಸೇನಾ ಪಡೆ ಕೂಡಲೇ ಸ್ಥಳಕ್ಕೆ ಧಾವಿಸಿದ್ದು ಸೂಟ್ಕೇಸ್ ವಶಕ್ಕೆ ಪಡೆದು ಪರಿಶೀಲಿಸಿದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೂಂಛ್ ಜಿಲ್ಲೆಯ ಭಿಂಬರ್ ಗಲಿ ಮೇನ್ ಚೌಕ್ನಲ್ಲಿ ಈ ಸೂಟ್ಕೇಸ್ ಪತ್ತೆಯಾಗಿತ್ತು. ಕೂಡಲೇ ಈ ಬಗ್ಗೆ ಸೇನೆಗೆ ಮಾಹಿತಿ ನೀಡಲಾಗಿತ್ತು. ಅದರಂತೆ, ಸ್ಥಳಕ್ಕಾಗಮಿಸಿದ ಸೇನಾ ಪಡೆಯ ಪರಿಣತರ ತಂಡ ಸೂಟ್ಕೇಸ್ ಅನ್ನು ಜಾಗರೂಕತೆಯಿಂದ ತೆರೆದು ಪರಿಶೀಲಿಸಿದಾಗ ಅದರಲ್ಲಿ ಕಂಡಬಂದದ್ದು ಸ್ಫೋಟಕಗಳಲ್ಲ. ಒಂದಷ್ಟು ಉಡುಪುಗಳು ಮತ್ತು ನಿತ್ಯೋಪಯೋಗಿ ವಸ್ತುಗಳು.
ವಾರಸುದಾರರಿಲ್ಲದ ಸ್ಥಿತಿಯಲ್ಲಿ ಇದ್ದು ಸ್ಥಳೀಯ ಜನರ ಕುತೂಹಲ ಕೆರಳಿಸಿದ ಆ ಸೂಟ್ಕೇಸ್ ಒಬ್ಬ ಯೋಧನಿಗೆ ಸೇರಿದ್ದಾಗಿತ್ತು. ಕೆಲವೇ ಹೊತ್ತಿನಲ್ಲಿ ಸೂಟ್ಕೇಸ್ ವಾರಸುದಾರ ಯೋಧ ಸೇನಾ ಪಡೆಯ ತಂಡವನ್ನು ಭೇಟಿ ಮಾಡಿ ಸೂಟ್ಕೇಸ್ ಮರಳಿಪಡೆದುಕೊಂಡು ಹೋಗಿದ್ದ. ಆತ ಹೇಗೆ ಅದನ್ನು ಕಳೆದುಕೊಂಡ ಎಂಬಿತ್ಯಾದಿ ವಿವರಗಳನ್ನು ಬಹಿರಂಗಪಡಿಸಿಲ್ಲ. (ಏಜೆನ್ಸೀಸ್)