ನಿಮಜ್ಜನಕ್ಕೂ ಮುನ್ನ ಗಣೇಶ ಮೂರ್ತಿಯನ್ನು ತಬ್ಬಿ ಅಳುತ್ತಿರುವ ಬಾಲಕ! ವಿಡಿಯೋ ಕಂಡು ಭಾವುಕರಾದ ನೆಟ್ಟಿಗರು

Boy Worship
Published on

ನವದೆಹಲಿ: ನಿಮಜ್ಜನಕ್ಕೂ ಮುನ್ನ ಬಾಲಕನೊಬ್ಬ ಮಹಾಗಣಪತಿ ಮೂರ್ತಿಯನ್ನು ಅಪ್ಪಿಕೊಂಡು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಬಾಲಕನ ಭಕ್ತಿಯನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.

ಅಭಿನವ್​ ಅರೋರಾ ಎಂಬ 9 ವರ್ಷದ ಬಾಲಕ ನದಿಯ ದಡದಲ್ಲಿ ಗಣಪತಿ ಮೂರ್ತಿಯ ಮುಂದೆ ಕುಳಿತು, ಅಳುತ್ತಾ ಪೂಜೆ ಮಾಡುತ್ತಿದ್ದಾನೆ. ಕೈಯಲ್ಲಿ ಲಡ್ಡು ಹಿಡಿದುಕೊಂಡು ಗಣೇಶನ ಸೊಂಡಿಲಿನ ಬಳಿ ಲಡ್ಡು ಇಟ್ಟು ಗೋಳಾಡುತ್ತಿರುವುದನ್ನು ಕಾಣಬಹುದು. ಬಾಲಕ ಅಳುತ್ತಾ ಗಣೇಶನನ್ನು ಬೇಗನೆ ಹಿಂತಿರುಗುವಂತೆ ಕೇಳಿಕೊಳ್ಳುತ್ತಾನೆ.

ವಿಗ್ರಹವನ್ನು ನಿಮಜ್ಜನಕ್ಕೆ ತೆಗೆದುಕೊಂಡು ಹೋಗಲು ಅರ್ಚಕರು ಬರುವಷ್ಟರಲ್ಲಿ ಅಭಿನವ್ ವಿಗ್ರಹವನ್ನು ಅಪ್ಪಿಕೊಂಡು ಅಳುತ್ತಿದ್ದ. ದೃಶ್ಯಗಳಲ್ಲಿ ಶುದ್ಧ ಭಕ್ತಿ ಇರುವುದರಿಂದ ನೋಡುಗರು ಸಹ ಭಾವುಕರಾದರು.

ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯವಾಗಿರುವ ಅಭಿನವ್, ಇನ್​​ಸ್ಟಾಗ್ರಾಂನಲ್ಲಿ 9.3 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಳವಾದ ಆಸಕ್ತಿ ಹೊಂದಿರುವ ಅಭಿನವ್, ಹಿಂದೂ ಆಚರಣೆಗಳನ್ನು ಅನುಸರಿಸುವ, ಆಚರಿಸುವ, ಹಿಂದೂ ಧರ್ಮಗ್ರಂಥಗಳನ್ನು ಓದುವ ಮತ್ತು ಧಾರ್ಮಿಕ ಗುರುಗಳನ್ನು ಭೇಟಿ ಮಾಡುವ ಚಿತ್ರಗಳು ಮತ್ತು ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.

ಈ ಬಾಲಕನನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಭಾರತದ ಕಿರಿಯ ಆಧ್ಯಾತ್ಮಿಕ ಬೋಧಕ ಎಂದು ಗೌರವಿಸಿದ್ದಾರೆ. ಸದ್ಯ ಸುಮಾರು 23 ಲಕ್ಷ ಮಂದಿ ಅಭಿನವ್ ಅವರ ವಿಡಿಯೋವನ್ನು ವೀಕ್ಷಿಸಿ ಕಮೆಂಟ್ ಮಾಡಿದ್ದಾರೆ. ಅಭಿನವ್ ಉದ್ಯಮಿ ಮತ್ತು ಬರಹಗಾರ ತರುಣ್ ರಾಜ್ ಅರೋರಾ ಅವರ ಮಗ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net