ನಿಜವಾದ ಅಸ್ತಿತ್ವದ ಅರಿವಿಲ್ಲ

ವಿಜಯವಾಣಿ (1)
Published on

ನ ಪ್ರಹೃಷ್ಯತಿ ಸನ್ಮಾನೇ ನಾಪಮಾನೇ ಚ ಕುಪ್ಯತಿ |

ನ ಕ್ರುದ್ಧಃ ಪರೂಷಂ ಬ್ರೂಯಾತ್ ಸ ವೈ ಸಾಧೂತ್ತಮಃ ಸ್ಮೃಃ ||

ಯಾರು ಸನ್ಮಾನದಿಂದ ಗರ್ವಿತರಾಗುವುದಿಲ್ಲವೋ, ಅಪಮಾನ ದಿಂದ ಕ್ರೋಧಿತರಾಗುವುದಿಲ್ಲವೋ, ಕೋಪಗೊಂಡಾಗಲೂ ಕಠೋರವಾದ ಮಾತುಗಳನ್ನು ಆಡುವುದಿಲ್ಲವೋ, ಅವರನ್ನು ಶ್ರೇಷ್ಠ ಸಾಧು ಎಂದು ಕರೆಯುತ್ತಾರೆ.

ನಿಂದೆ ಮತ್ತು ಪ್ರಶಂಸೆ, ಸನ್ಮಾನ ಮತ್ತು ಅಪಮಾನ ಇವೆರಡರಿಂದಲೂ ಕೇವಲ ನಿರಾಶೆಯೇ ಪ್ರಾಪ್ತಿಯಾಗುತ್ತದೆ. ಯಾವುದನ್ನು ನಾವು ಅತ್ಯಂತ ಶ್ರೇಷ್ಠ ಎಂದು ತಿಳಿದುಕೊಳ್ಳುತ್ತೇವೋ ಅದೇ ಸನ್ಮಾನ. ಸನ್ಮಾನದ ನಂತರ ಪ್ರಾಪ್ತಿಯಾಗುವ ಸ್ಥಿತಿಯನ್ನು ಅಪಮಾನ ಎಂದುಕೊಳ್ಳುತ್ತೇವೆ. ಸನ್ಮಾನ ಪ್ರಾಪ್ತಿ ಆದ ಮೇಲೆ ಅದನ್ನು ಕಳೆದುಕೊಳ್ಳುವ ಭಯ ಉಂಟಾಗುತ್ತದೆ. ಆದ್ದರಿಂದ ಸನ್ಮಾನ ಮತ್ತು ಅಪಮಾನ ಈ ಎರಡು ತತ್ವಗಳನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ.

ಮೊದಲನೆಯದಾಗಿ, ಸನ್ಮಾನ ಮತ್ತು ಅಪಮಾನ ಈ ಎರಡೂ ಸತ್ಯವಲ್ಲ ಎಂದು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಹೊಗಳಿಕೆಯಾಗಲಿ ಖಂಡನೆಯಾಗಲಿ ಎರಡೂ ಸತ್ಯವಲ್ಲ. ಯಾರಾದರೂ ನಮ್ಮ ಅಹಂಕಾರವನ್ನು ಪುಸಲಾಯಿಸಿದಾಗ ಅಥವಾ ಮುದ್ದಿಸಿದಾಗ ಅದನ್ನು ನಾವು ಪ್ರಶಂಸೆ ಎಂದು ತಿಳಿದು ಸಂತೋಷಪಡುತ್ತೇವೆ. ಅದೇ ರೀತಿಯಲ್ಲಿ ಯಾರಾದರೂ ನಮ್ಮ ಅಹಂಕಾರವನ್ನು ನೋಯಿಸಿದಾಗ ನಾವು ಅದನ್ನೇ ಅಪಮಾನ ಎಂದು ದುಃಖಿಸುತ್ತೇವೆ.

ಮಾನ ಮತ್ತು ಅವಮಾನ ಎರಡೂ ಅಹಂಕಾರದ ಅನುಭವಗಳು. ವಾಸ್ತವವಾಗಿ ಅಹಂಕಾರವು ಜೀವನದ ದೊಡ್ಡ ಸುಳ್ಳು. ನಾವು ಯಾರೆಂದು ನಮಗೇ ತಿಳಿದಿಲ್ಲ. ನಾವು ನಿಜವಾಗಿಯೂ ಏನಾಗಿದ್ದೇವೆ ಎಂಬುದು ನಮಗೆ ಗೊತ್ತಿಲ್ಲ. ಅಹಂಕಾರವು ಒಂದು ಕಾಲ್ಪನಿಕ ಅಸ್ತಿತ್ವವಾಗಿದೆ. ಆದರೆ ಇದು ಇಲ್ಲದೆ ನಮಗೆ ಬದುಕಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮಗೆ ನಿಜವಾದ ಅಸ್ತಿತ್ವದ ಅರಿವಿಲ್ಲ. ಆದ್ದರಿಂದ ನಾವು ಒಬ್ಬ ಕಾಲ್ಪನಿಕ ಸುಳ್ಳು ಯಜಮಾನನನ್ನು, ಸುಳ್ಳು ಕೇಂದ್ರವನ್ನು ರಚಿಸಿಕೊಂಡಿದ್ದೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net