ಕೈಲಾಸ ದೇಶಕ್ಕಾಗಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ

Kailasa
Published on

ಜಿನೀವಾ: ನಿತ್ಯಾನಂದ ಸ್ವಾಮಿ ಸ್ಥಾಪಿಸಿದ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (ಯುಎಸ್‌ಕೆ) ಪ್ರತಿನಿಧಿಗಳು ಕಳೆದ ವಾರ ಜಿನೀವಾದಲ್ಲಿ ನಡೆದ ಸಾರ್ವಜನಿಕ ಸಭೆಗಳಲ್ಲಿ ಸಲ್ಲಿಸಿದ ಅರ್ಜಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ವಜಾ ಮಾಡಿದೆ.

ಈ ಕಾರ್ಯಕ್ರಮದಲ್ಲಿ ಸ್ಥಳೀಯ ಹಕ್ಕುಗಳು ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಕಾಲ್ಪನಿಕ ರಾಜ್ಯದ ಪರವಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಪ್ರತಿನಿಧಿಯೊಬ್ಬರು ಮಾತನಾಡುತ್ತಿರುವ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಫೆಬ್ರವರಿ 24 ರಂದು, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ ಸಾಮಾನ್ಯ ಚರ್ಚೆಯಲ್ಲಿ, ಕೈಲಾಸ ದೇಶವನ್ನು ಮಾಡುವ ಬಗ್ಗೆ ಕೈಲಾಸ ಪ್ರತಿನಿಧಿಯೊಬ್ಬರು ಸಂಕ್ಷಿಪ್ತವಾಗಿ ಮಾತನಾಡಿದರು. ಈ ಬಗ್ಗೆ ಹೆಚ್ಚಿನ ಪ್ರಚಾರ ಪಡೆಯಲು ಸಾಧ್ಯವಿಲ್ಲ ಹಾಗೂ ಈ ವಿಚಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರಣಕ್ಕೆ ಈ ಅರ್ಜಿಯನ್ನು ಸಮಿತಿಯು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಲಾಗಿದೆ. ಜಿನೀವಾದಲ್ಲಿ ಭಾರತದ ಖಾಯಂ ಸಭೆಯಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತದ ಮಾಜಿ ಖಾಯಂ ಪ್ರತಿನಿಧಿ TS ತಿರುಮೂರ್ತಿ, ಇದು ವಿಶ್ವಸಂಸ್ಥೆ ಕಾರ್ಯವಿಧಾನಗಳ ಸಂಪೂರ್ಣ ದುರ್ಬಳಕೆ ಎಂದು ಬಣ್ಣಿಸಿದ್ದಾರೆ.

ಕಾನೂನಿಂದ ಪಲಾಯನಗೈದವರಿಂದ ನಡೆಸಲ್ಪಡುವ ಸಂಸ್ಥೆಯ ಪ್ರತಿನಿಧಿಗಳು ವಿಶ್ವಸಂಸ್ಥೆಯನ್ನು ಎನ್​ಜಿಒಗಳು ಅಥವಾ ಇನ್ಯಾವುದೇ ರೀತಿಯಲ್ಲಿ ಸಂಬೋಧಿಸುವುದು ವಿಶ್ವಸಂಸ್ಥೆ ಕಾರ್ಯವಿಧಾನಗಳ ಸಂಪೂರ್ಣ ದುರುಪಯೋಗವಾಗಿದೆ. ಭಾರತವು ವಿಶ್ವಾಸಾರ್ಹವಾದ ಎನ್​ಜಿಒಗಳು ಮಾತ್ರ ಮಾನ್ಯತೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ದೃಢವಾದ ಪ್ರಕ್ರಿಯೆಗೆ ಕರೆ ನೀಡುವುದರಲ್ಲಿ ಸ್ಥಿರವಾಗಿದೆ. ಇದು ನಮ್ಮ ಕರೆಗೆ ಕಿವಿಗೊಟ್ಟಿಲ್ಲ ಎಂದು ಹೇಳಿದರು.

ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಭಾರತದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಹಲವಾರು ಆರೋಪಗಳನ್ನು ಹೊತ್ತಿದ್ದು, ಈ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಅವರು 2019 ರಲ್ಲಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವನ್ನು ಸ್ಥಾಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net