

ವಿಶ್ವಸಂಸ್ಥೆ: ನಿಷೇಧಿತ ಉಗ್ರ ಸಂಘಟನೆ ಅಲ್ಕೈದಾ ಜತೆಗೆ ನೇರ ಸಂಪರ್ಕ ಮತ್ತು ಅದರ ಪರವಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನದ ತೆಹ್ರಿಕ್ ಏ ತಾಲೀಬಾನ್ ಪಾಕಿಸ್ತಾನ್(ಟಿಟಿಪಿ) ಉಗ್ರ ಸಂಘಟನೆಯ ನಾಯಕ ನೂರ್ ವಾಲಿ ಮೆಹ್ಸೂದ್ ನನ್ನು ವಿಶ್ವಸಂಸ್ಥೆ ಕಪ್ಪುಪಟ್ಟಿಗೆ ಸೇರಿಸಿದೆ. ಅಷ್ಟೇ ಅಲ್ಲ, ಆತ ಜಾಗತಿಕ ಉಗ್ರ ಎಂದು ಘೋಷಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಸಮಿತಿಯ 1267 ಐಎಸ್ಐಎಲ್ ಮತ್ತು ಅಲ್ಕೈದಾ ನಿರ್ಬಂಧ ಕಮಿಟಿ ಮೆಹಸೂದ್(42) ಹೆಸರನ್ನು ಐಎಸ್ಐಎಲ್(ಡಾಯಿಷ್) ಮತ್ತು ಅಲ್ಕೈದಾ ನಿರ್ಬಂಧಪಟ್ಟಿಗೆ ಗುರುವಾರ ಸೇರಿಸಿದೆ. ಇದರಲ್ಲಿ ಪಾಕಿಸ್ತಾನಿ ಪ್ರಜೆಯಾದ ಆತನ ಪ್ರಯಾಣ ನಿರ್ಬಂಧ, ಆಸ್ತಿ ಮುಟ್ಟುಗೋಲು ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.
ಇದನ್ನೂ ಓದಿ: ಲಡಾಖ್ಗೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮೆಹಸೂದ್ ಟೆರರ್ ಫಂಡಿಂಗ್, ಉಗ್ರ ಚಟುವಟಿಕೆಯ ಪ್ಲಾನಿಂಗ್, ಅವುಗಳ ಅನುಷ್ಠಾನ ಅಥವಾ ಅಂತಹ ಕೃತ್ಯಗಳಿಗೆ ಪ್ರಚೋದನೆ ನೀಡುವುದು, ಅಲ್ಕೈದಾ ಮತ್ತು ಅದರ ಸಹಸಂಘಟನೆಗಳ ಪರವಾಗಿ ಅಥವಾ ಅವುಗಳಿಗೆ ಬೆಂಬಲ ಸೂಚಿಸುವ ಕೆಲಸಗಳಲ್ಲಿ ಭಾಗಿಯಾಗಿರುವ ಕಾರಣ ಈ ಕ್ರಮ ತೆಗೆದುಕೊಂಡಿರುವುದಾಗಿ ವಿಶ್ವಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ದಾರ್ಶನಿಕ ಪ್ರವಾದಿ ಶ್ರೀಶಂಕರರ ವಿಶ್ವಪ್ರಜ್ಞೆ
2018ರಲ್ಲಿ ಟಿಟಿಪಿಯ ನಾಯಕ ಮೌಲಾನಾ ಫಝ್ಲುಲ್ಲಾಹ್ ನಿಧನನಾದ ಬೆನ್ನಿಗೆ, ಜೂನ್ ತಿಂಗಳಲ್ಲಿ ಮೆಹಸೂದ್ನನ್ನು ಟಿಟಿಪಿಯ ನಾಯಕ ಎಂದು ಘೋಷಿಸಲಾಗಿತ್ತು. ಅಲ್ ಕೈದಾ ಜತೆಗಿನ ನಂಟಿನ ಕಾರಣಕ್ಕೆ ಟಿಟಿಪಿಯನ್ನು ವಿಶ್ವಸಂಸ್ಥೆ 2011ರ ಜುಲೈ 29ರಂದೇ ಕಪ್ಪುಪಟ್ಟಿಗೆ ಸೇರಿಸಿತ್ತು. ಮೆಹಸೂದ್ ನಾಯಕತ್ವದಲ್ಲಿ ಪಾಕಿಸ್ತಾನದ ಉದ್ದಗಲಕ್ಕೂ ಅನೇಕ ಉಗ್ರಕೃತ್ಯಗಳು ನಡೆದಿವೆ. ಇವುಗಳ ಹೊಣೆಗಾರಿಕೆಯನ್ನು ಟಿಟಿಪಿ ವಹಿಸಿಕೊಂಡಿತ್ತು ಕೂಡ.
2019ರ ಜುಲೈನಲ್ಲಿ ಉತ್ತರ ವಾಝಿರಿಸ್ತಾನ್ನಲ್ಲಿ ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ನಡೆದ ದಾಳಿ, ಅದೇ ವರ್ಷ ಆಗಸ್ಟ್ನಲ್ಲಿ ಖೈಬರ್ ಪಖ್ತುಂಖ್ವಾದಲ್ಲಿ ಪಾಕಿಸ್ತಾನದ ಯೋಧರ ಮೇಲೆ ನಡೆದ ದಾಳಿಯೂ ಇವುಗಳಲ್ಲಿ ಸೇರಿವೆ. ಇದೇ ಗುಂಪು 2010ರ ಮೇ 1ರಂದು ಟೈಮ್ಸ್ ಸ್ಕ್ವೇರ್ ನಲ್ಲಿ ಬಾಂಬ್ ದಾಳಿ ನಡೆಸುವುದಕ್ಕೆ ಪ್ರಯತ್ನಿಸಿತ್ತು. ಅಷ್ಟೇ ಅಲ್ಲ, 2010ರ ಏಪ್ರಿಲ್ನಲ್ಲಿ ಪೇಶಾವರದಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿದ ಪರಿಣಾಮ ಆರು ಪಾಕಿಸ್ಥಾನೀಯರು ಮೃತಪಟ್ಟದ್ದಲ್ಲದೆ, ಕನಿಷ್ಠ 20 ಇತರರ ಗಾಯಗೊಂಡಿದ್ದರು ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಮೆಹಸೂದ್ ವಿರುದ್ಧ ನಿಷೇಧ ಹೇರಲಾಗಿದೆ ಎಂದು ಕಮಿಟಿ ತಿಳಿಸಿದೆ. (ಏಜೆನ್ಸೀಸ್)