

ಬೆಂಗಳೂರು: ಹಜ್ ಯಾತ್ರೆ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ 50 ಮಹಿಳೆಯರು ಹಾಗೂ ಅವರ ಅವಲಂಬಿತರು ಸೇರಿ 100 ಮಂದಿಗೆ ವೈಯಕ್ತಿಕ ವೆಚ್ಚದಲ್ಲಿ ಉಮ್ರಾ ಯಾತ್ರೆ ವ್ಯವಸ್ಥೆ ಮಾಡುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ನಗರದ ಹೆಗಡೆನಗರದಲ್ಲಿರುವ ಹಜ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿ ಕಾರ್ಯನಿರ್ವಹಣೆ ಮಾಡಿದ ವಿವಿಧ ಸಮಿತಿ ಹಾಗೂ ತಂಡಗಳ 750 ಸ್ವಯಂಸೇವಕರು ಹಾಗೂ ಅಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
2018ರಲ್ಲಿ 1,200 ಸ್ವಯಂಸೇವಕರನ್ನು ಉಮ್ರಾ ಯಾತ್ರೆಗೆ ಕಳುಹಿಸುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ 900 ಮಂದಿ ಈಗಾಗಲೇ ಉಮ್ರಾಗೆ ಹೋಗಿ ಬಂದಿದ್ದು, ಉಳಿದವರನ್ನು ಈ ವರ್ಷ ಕಳುಹಿಸಲಾಗುವುದು. ಅದರಲ್ಲಿ 50 ಮಹಿಳೆಯರು ಹಾಗೂ ಅವರ ಅವಲಂಭಿತರಿಗೆ ಅವಕಾಶ ಕಲ್ಪಿಸಲಾಗಗುವುದು ಎಂದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಮಾತನಾಡಿ, ಜಮೀರ್ ಅಹಮದ್ ಅವರು ಸ್ವಯಂಸೇವಕರನ್ನು ಗೌರವಿಸುತ್ತಿರುವುದು ಉತ್ತಮ ಕೆಲಸ. ಬಡ ಸಮುದಾಯದ ಪರ ಸದಾ ನಿಲ್ಲುವ ನಾಯಕ ಎಂದು ಅವರು ಶ್ಲಾಸಿದರು.
ಮೌಲಾನ ಮಕ್ಸೂದ್ ಇಮ್ರಾನ್ ರಶಾದಿ, ಮೌಲಾನ ಝೈನುಲ್ ಆಬಿದೀನ್, ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಎನ್.ಕೆ.ಮುಹಮ್ಮದ್ ಶಾಫಿ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಖಾನ್ ಫರ್ವೇಜ್, ರಾಜ್ಯ ಹಜ್ ಸಮಿತಿಯ ಮಾಜಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ಉಪಸ್ಥಿತರಿದ್ದರು.