ನುಡಿದಂತೆ ನಡೆದ ಸಿದ್ದರಾಮಯ್ಯಗೆ ಸಿಹಿ ತಿನಿಸಿದ ಉಮಾಶ್ರೀ!

umasri
Published on

ಬೆಂಗಳೂರು: ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ ಮಾಜಿ ಸಚಿವರಾದ ಎಂ. ಆರ್ ಸೀತಾರಾಮ್, ಉಮಾಶ್ರೀ ಮತ್ತು ಎಚ್. ಪಿ ಸುಧಾಮ್ ದಾಸ್ ಗುರುವಾರ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಕೆ ಪಾಟೀಲ್, ಬೋಸರಾಜು ಸೇರಿದಂತೆ ಶಾಸಕರು, ನೂತನ ಶಾಸಕರುಗಳ ಕುಟುಂಬ ಸದಸ್ಯರು ಹಾಜರಿದ್ದರು.

ಸೀತಾರಾಮ್ ದೇವರ ಹೆಸರಲ್ಲಿ, ಉಮಾಶ್ರೀ ಸಂವಿಧಾನ ಹಾಗೂ ಭಗವಂತನ ಹೆಸರಲ್ಲಿ, ಸುಧಾಮ್ ದಾಸ್ ಬುದ್ಧ ಬಸವ ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಉಮಾಶ್ರೀ ಬಾಗಲಕೋಟೆ ಜಿಲ್ಲೆಯ ತೇರದಾಳದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಟಿಕೆಟ್ ಬಯಸಿದ್ದರು, ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಬಲಿಜ ಸಮುದಾಯ ಪ್ರಮುಖ ನಾಯಕ ಎಂ.ಆರ್.ಸೀತಾರಾಮ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಭಾಗದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡುಬರುವಲ್ಲಿ ಪ್ರಯತ್ನಿಸಿದ್ದರೆ, ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಸೇರಿ ದಲಿತ ಮತಗಳ ಒಗ್ಗಟ್ಟಿಗೆ ಪ್ರಯತ್ನಿಸಿದ್ದರು.

ಉಮಾಶ್ರೀ ಹಾಗೂ ಸುಧಾಮ್ ಹೆಸರು ಪರಿಗಣಿಸಿದ್ದಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಡಿ.ಕೆ ಶಿವಕುಮಾರ್ ಸುಧಾಮ್ ದಾಸ್ ಪರವಾಗಿ ಗಟ್ಟಿ ನಿಲುವು ತಾಳಿದರೆ, ಉಮಾಶ್ರೀಗೆ ಅವಕಾಶ ತಪ್ಪದಂತೆ ಸಿದ್ದರಾಮಯ್ಯ ನೋಡಿಕೊಂಡಿದ್ದರು.

ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಉಮಾಶ್ರೀ ಸಿದ್ದರಾಮಯ್ಯ ಸಿಹಿ ತಿನಿಸಿದರು. ಪರಿಷತ್​ ನಾಮ ನಿರ್ದೇಶನದ ವೇಳೆ ಅವಕಾಶ ಕಲ್ಪಿಸುವುದಾಗಿ ಸಿಎಂ ಉಮಾಶ್ರೀಗೆ ಮಾತುಕೊಟ್ಟಿದ್ದು, ಇದೀಗ ನುಡಿದಂತೆ ನಡೆದುಕೊಂಡಿದ್ದಾರೆ. ಇನ್ನು ಶಿಷ್ಟಾಚಾರದಂತೆ ಸಭಾಪತಿಯವರು ಹೊಸ ಸದಸ್ಯರಿಗೆ ಸೂಟ್‌ಕೇಸ್ ನೀಡುವಾಗ ಸಿಎಂ ಹಾಸ್ಯ ಚಟಾಕಿ ಹಾಕಿ, ಗಟ್ಟಿ ಯಾಗಿ ಹಿಡಿದುಕೊಳ್ಳುವಂತೆ ಸಲಹೆ ನೀಡಿದಾಗ ಉಮಾಶ್ರೀ ನಾಚಿಕೆಯಿಂದ ತಲೆಗೆ ಚಚ್ಚಿಕೊಂಡರು.

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸುಧಾಮ್‌ದಾಸ್, ಪಕ್ಷ ನನಗೆ ಒಳ್ಳೆಯ ಅವಕಾಶ ನೀಡಿದ್ದು, ಸರ್ಕಾರಿ ಅಧಿಕಾರಿಯಾಗಿ ಸಲ್ಲಿಸಿದ ಸೇವೆಯ ಅನುಭವ ಬಳಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದರು.

ತಮ್ಮ ಆಯ್ಕೆ ಅಸಮಾಧಾನ ಇರುವ ಕುರಿತು ಸಹ ಪತ್ರಕರ್ತರು ಪ್ರಶ್ನಿಸಿದಾಗ, ಅದು ಸಹಜವಲ್ಲವೇ, ಈಗ ಎಲ್ಲರೂ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net