

ಕೀವ್: ರಷ್ಯಾ-ಯೂಕ್ರೇನ್ ನಡುವಿನ ಯುದ್ಧ ಆರಂಭಗೊಂಡು ನೂರು ದಿನಗಳೇ ಪೂರೈಸಿದೆ. ಸಣ್ಣ ರಾಷ್ಟ್ರವಾದರೂ ತನ್ನ ಶಕ್ತಿ ಮೀರಿ ಹೋರಾಡುತ್ತಿರುವ ಯೂಕ್ರೇನ್ ತನ್ನ ಹೋರಾಟವನ್ನು ಮುಂದುವರಿಸಿದೆ.
100 ದಿನಗಳ ಹೋರಾಟದಲ್ಲಿ ಬರೋಬ್ಬರಿ 10,000 ಯೋಧರನ್ನು ಯೂಕ್ರೇನ್ ಕಳೆದುಕೊಂಡಿದೆ ಎಂದು ಝೆಲೆನ್ಸ್ಕೀ ಸಲಹೆಗಾರ ಆಘಾತಕಾರಿ ಮಾಹಿತಿ ನೀಡಿದ್ದಾರೆ. ಈ ನಡುವೆ ರಷ್ಯಾದ 22 ಸಾವಿರಕ್ಕೂ ಅಧಿಕ ಯೋಧರನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಯೂಕ್ರೇನ್ ಹೇಳಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಒಲೆಕ್ಸಿಯಾ ಅರೆಸ್ಟೊವ್ಯಾಚ್, ರಷ್ಯಾ ನಡೆಸಿದ ಐದಾರು ಭೀಕರ ದಾಳಿ ವೇಳೆ ತನ್ನ ಬಹುತೇಕ ಸೈನಿಕರನ್ನು ಕಳೆದುಕೊಂಡಿದ್ದೇವೆ. ಸುಮಾರು 10 ಸಾವಿರ ಯೋಧರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಷ್ಯಾ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ, ನಡೆಸಿದ ಕೆಲವು ಭೀಕರ ದಾಳಿಗಳು ನಮ್ಮ ಸೈನಿಕರನ್ನು ಬಲಿ ಪಡೆದಿವೆ. ನಾಲ್ಕನೇ ತಿಂಗಳಲ್ಲೂ ಯುದ್ಧ ಮುಂದುವರಿದಿದ್ದು, ನಮ್ಮ ಬಹುತೇಕ ಎಲ್ಲಾ ನಗರಗಳು ರಕ್ತಸಿಕ್ತವಾಗಿವೆ. ಈ ನಡುವೆಯೂ ಭಾರೀ ಹೋರಾಟವನ್ನು ಮುಂದುವರಿಸಿದ್ದೇವೆ ಎಂದು ಹೇಳಿದ್ದಾರೆ.
ದಕ್ಷಿಣದ ಮಾರಿಯುಪೋಲ್ ಸೇರಿದಂತೆ ಇತರೆ ನಗರ ನೈರ್ಮಲ್ಯ ವ್ಯವಸ್ಥೆಗಳು ಸಂಪೂರ್ಣ ನಾಶವಾಗಿದ್ದು, ಶವಗಳು ಬೀದಿಗಳಲ್ಲಿ ಕೊಳೆಯುತ್ತಿವೆ. ಯುದ್ಧ ಮುಂದುವರಿದಿರುವುದರಿಂದ ಶವ ಸಂಸ್ಕಾರ ಮಾಡಲು ಇನ್ನೂ ಸಾಧ್ಯವಾಗುತ್ತಿಲ್ಲ. (ಏಜೆನ್ಸೀಸ್)