ನ್ಯಾಟೋ ನಡೆಗೆ ಯೂಕ್ರೇನ್ ಟೀಕೆ; ಮಿತ್ರ ರಾಷ್ಟ್ರಗಳನ್ನು ಒಗ್ಗೂಡಿಸುತ್ತಿದೆ ಅಮೆರಿಕ

Russia
ರಷ್ಯಾದ ದಾಳಿಯಿಂದ ಇರ್ಪಿನ್ ನದಿಯ ಸೇತುವೆ ಹಾನಿಗೊಂಡಿದ್ದು, ವಾಹನ ಸಂಚಾರಕ್ಕೆ ತಡೆಯಾದ ಕಾರಣ ಸಂಕಷ್ಟಕ್ಕೆ ನಾಗರಿಕರನ್ನು ದಡಕ್ಕೆ ಕರೆತಂದ ಯೋಧರು.
Published on

ಮಾಸ್ಕೋ/ಕಿಯೆವ್: ಯೂಕ್ರೇನ್ ವಿರುದ್ಧ ರಷ್ಯಾ ದಾಳಿ ತೀವ್ರಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹೆಚ್ಚಿನ ಹಾನಿ ಆಗುತ್ತಿದೆ. ನಾಗರಿಕರ ಮೇಲೂ ದಾಳಿ ಆಗುತ್ತಿರುವ ಕಾರಣ ಯುದ್ಧ ಪರಿಣಾಮ ಗಂಭೀರವಾಗಿದೆ. ಇದನ್ನು ತಡೆಯಲು, ತನ್ನ ಆಗಸ ವ್ಯಾಪ್ತಿಯನ್ನು ನೋ ಫ್ಲೈ ಝೋನ್ ಎಂದು ಘೋಷಿಸಬೇಕು ಎಂದು ನ್ಯಾಟೋ ರಾಷ್ಟ್ರಗಳಿಗೆ ಯೂಕ್ರೇನ್ ಮನವಿ ಮಾಡಿತ್ತು. ಆದರೆ, ಇದನ್ನು ನ್ಯಾಟೋ ರಾಷ್ಟ್ರಗಳು ತಿರಸ್ಕರಿಸಿವೆ. ನ್ಯಾಟೋ ರಾಷ್ಟ್ರಗಳ ಈ ನಡೆಯ ಬಗ್ಗೆ ಯೂಕ್ರೇನ್ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಜನರ ಸಾವಿಗೆ ನೀವೇ ಹೊಣೆ ಎಂದು ಎಚ್ಚರಿಸಿದೆ. ಯೂಕ್ರೇನ್​ನಲ್ಲಿ ರಷ್ಯಾ ದಾಳಿಗೆ ಇದುವರೆಗೆ ಕನಿಷ್ಠ 351 ನಾಗರಿಕರು ಮೃತಪಟ್ಟಿದ್ದು, 675 ನಾಗರಿಕರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಇದೇ ವೇಳೆ, ರಷ್ಯಾ ಸೇನೆ ಯೂಕ್ರೇನ್​ನ ಎರಡನೇ ಅತಿದೊಡ್ಡ ಅಣುಸ್ಥಾವರದ ಸಮೀಪದ ಬಂದರಿಗೆ ಮುತ್ತಿಗೆ ಹಾಕಿದೆ. ಅಲ್ಲಿಂದ ಅಣುಸ್ಥಾವರ 32 ಕಿ.ಮೀ. ದೂರದಲ್ಲಿದೆ. ಶುಕ್ರವಾರವಷ್ಟೇ ಝುಪೋರಿಝ್ಯಾದಲ್ಲಿರುವ ಯುರೋಪ್​ನ ಅತಿದೊಡ್ಡ ಅಣುಸ್ಥಾವರವನ್ನು ರಷ್ಯಾ ಸೇನೆ ವಶಪಡಿಸಿಕೊಂಡಿತ್ತು.

ನೋ ಫ್ಲೈ ಝೋನ್ ಬೇಡಿಕೆ ನ್ಯಾಟೋ ತಿರಸ್ಕರಿಸಿದ್ದೇಕೆ?: ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮಾಡಿದ್ದ ಮನವಿಯನ್ನು ಜಾರಿಗೆ ತಂದರೆ, ಈಗ ಎರಡು ದೇಶಗಳ ನಡುವೆ ಇರುವ ಸಮರ ಜಾಗತಿಕ ಸಮರವಾಗಿ ಬದಲಾಗಬಹುದು. ರಷ್ಯಾ ಸೇನೆ ನ್ಯಾಟೊ ರಾಷ್ಟ್ರಗಳ ಮೇಲೂ ದಾಳಿ ಶುರುಮಾಡಬಹುದು ಎಂಬ ಕಾರಣವನ್ನು ನ್ಯಾಟೋ ನಾಯಕರು ಮುಂದಿಟ್ಟಿದ್ದಾರೆ. ಯಾವುದೇ ರಾಷ್ಟ್ರ ನೋ ಫ್ಲೈ ಝೋನ್ ಘೋಷಿಸಿದರೆ ಅದನ್ನು ರಷ್ಯಾ ವಿರುದ್ಧ ಸಾರಿದ ಯುದ್ಧ ಎಂದೇ ಪರಿಗಣಿಸಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಎಚ್ಚರಿಸಿದ್ದಾರೆ.

ಕಿಯೆವ್​ನಲ್ಲೇ ಇದ್ದೇನೆ..: ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಪೋಲೆಂಡ್​ಗೆ ಪಲಾಯನ ಗೈದಿದ್ದಾರೆ ಎಂಬ ವರದಿಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ತಾವು ಕಿಯೆವ್​ನಲ್ಲೇ ಇರುವುದಾಗಿ ಇಲ್ಲಿಂದಲೇ ಕೆಲಸ ಮಾಡುತ್ತಿರುವುದಾಗಿ ಇನ್​ಸ್ಟಾಗ್ರಾಂನ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಯುರೋಪ್ ಪ್ರವಾಸ: ರಷ್ಯಾ ವಿರುದ್ಧ ಸಮರ ಸಾರುವುದಕ್ಕೆ ವಿವಿಧ ರಾಷ್ಟ್ರಗಳ ಬೆಂಬಲ ಕೋರುವ ಪ್ರಯತ್ನವನ್ನು ಅಮೆರಿಕ ತೀವ್ರಗೊಳಿಸಿದೆ. ಈ ನಿಟ್ಟಿನಲ್ಲಿ ಯುರೋಪ್ ಒಕ್ಕೂಟದ ಮಿತ್ರ ರಾಷ್ಟ್ರಗಳನ್ನು ಒಗ್ಗೂಡಿಸಲು ಅಮೆರಿಕದ ಉಪಾಧ್ಯಕ್ಷೆ ಯಾದ ಭಾರತ ಮೂಲದ ಕಮಲಾ ಹ್ಯಾರಿಸ್ ಮುಂದಿನ ವಾರ ಪೋಲೆಂಡ್ ಮತ್ತು ರೊಮೇನಿಯಾಕ್ಕೆ ಭೇಟಿ ನೀಡಲಿದ್ದಾರೆ. ಮಾರ್ಚ್ 9-11ರ ನಡುವೆ ಈ ಪ್ರಯಾಣ ನಿಗದಿಯಾಗಿದೆೆ ಎಂದು ಕಮಲಾ ಅವರ ಡೆಪ್ಯೂಟಿ ಪ್ರೆಸ್ ಸೆಕ್ರಟರಿ ಸರ್ಬೀನಾ ಸಿಂಗ್ ತಿಳಿಸಿದ್ದಾರೆ.

ವಿದೇಶಿಯರ ಸ್ಥಳಾಂತರಕ್ಕೆ ರಷ್ಯಾ ನೆರವು: ಯೂಕ್ರೇನ್​ನ ಯುದ್ಧಪೀಡಿತ ಪ್ರದೇಶದಲ್ಲಿ ವಿಶೇಷವಾಗಿ ರ್ಖಾವ್​ನಲ್ಲಿ ಸಿಲುಕಿರುವ 3,189 ಭಾರತೀಯರು, 2700 ವಿಯೆಟ್ನಾಮೀಸ್, 202 ಚೀನೀಯರು, ಸುಮಿಯಲ್ಲಿರುವ 576 ಭಾರತೀಯರು, 101 ಘಾನಾ ಪ್ರಜೆಗಳು, 121 ಚೀನೀಯರನ್ನು ಸ್ಥಳಾಂತರ ಮಾಡಲು ಚೀನಾ ನೆರವು ನೀಡುವುದಾಗಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾ ರಾಯಭಾರಿ ವಸ್ಸಿಲಿ ನೆಬೆನ್​ಝಿಯಾ ತಿಳಿಸಿದ್ದಾರೆ.

ರಷ್ಯಾ ಮಾಧ್ಯಮ ವರದಿ ತಡೆಗೆ ಪ್ರಯತ್ನ: ರಷ್ಯಾದ ಸುದ್ದಿಮೂಲಗಳಿಗೆ ತಡೆಯೊಡ್ಡುವಂತೆ ಕೆಲವು ರಾಷ್ಟ್ರಗಳು (ಯೂಕ್ರೇನ್ ಅಲ್ಲ) ನಮ್ಮಲ್ಲಿ ಕೇಳಿಕೊಂಡಿವೆ. ಆದರೆ, ನಾವು ಮುಕ್ತ ಅಭಿವ್ಯಕ್ತಿಗೆ ಅನುಕೂಲವಾಗಿರುವವರು. ಯಾವುದೇ ಸುದ್ದಿ ಮೂಲವನ್ನು ತಡೆಯಲಾಗದು. ಗನ್​ಪಾಯಿಂಟ್ ಎದುರಿನಲ್ಲಿ ಮಾತ್ರವೇ ಅಂತಹ ಕೆಲಸ ನಡೆದೀತೇ ಹೊರತು ಉಳಿದಂತೆ ಆಗಲ್ಲ ಎಂದು ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲನ್ ಮಸ್ಕ್ ಶನಿವಾರ ಟ್ವೀಟ್ ಮಾಡಿದರು.

ಫೇಸ್​ಬುಕ್, ಟ್ವಿಟರ್ ಮೇಲೆ ನಿಷೇಧ: ಯುದ್ಧಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಆರೋಪಿಸಿ ಅಮೆರಿಕದ ಫೇಸ್​ಬುಕ್, ಟ್ವಿಟರ್​ಗಳ ಮೇಲೆ ರಷ್ಯಾ ನಿರ್ಬಂಧ ಹೇರಿದೆ. ಸುಳ್ಳು ಸುದ್ದಿಗಳನ್ನು ಬಿತ್ತರಿಸಿದರೆ 15 ವರ್ಷ ಜೈಲಿಗೆ ಹಾಕುವ ಶಾಸನವನ್ನು ರಷ್ಯಾ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಬಿಬಿಸಿ ಮಾಸ್ಕೋದಲ್ಲಿ ತನ್ನ ಕಾರ್ಯಾಲಯವನ್ನು ಮುಚ್ಚಿದೆ.

  • ಯೂಕ್ರೇನ್ ಮೇಲೆ ದಾಳಿ ಆರಂಭಿಸಿದ ದಿನದಿಂದ ಇದುವರೆಗೆ ರಷ್ಯಾ 500 ಕ್ಷಿಪಣಿಗಳನ್ನು ದಾಳಿಗೆ ಬಳಸಿದೆ.
  • ಮಗಳು ಮನೆಗೆ ಬಂದ ಖುಷಿಗೆ ಪಿಎಂ ಪರಿಹಾರ ನಿಧಿಗೆ 21 ಸಾವಿರ ರೂ., ಸಿಎಂ ಪರಿಹಾರ ನಿಧಿಗೆ 11 ಸಾವಿರ ರೂ. ದೇಣಿಗೆ ನೀಡಿದ ಹಿಮಾಚಲದ ಜೆ.ಬಿ.ಸಿಂಗ್.

ಭಾರತದಲ್ಲೇ ಇಂಟರ್ನ್​ಶಿಪ್: ಯೂಕ್ರೇನ್​ನಿಂದ ಸ್ಥಳಾಂತರವಾಗಿರುವ ವೈದ್ಯವಿದ್ಯಾರ್ಥಿಗಳಿಗೆ ಭಾರತದಲ್ಲೇ ಇಂಟರ್ನ್​ಶಿಪ್ ಪೂರ್ಣಗೊಳಿಸುವುದಕ್ಕೆ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್​ಎಂಸಿ) ಅವಕಾಶ ನೀಡಿದೆ. ಈ ಕುರಿತು ಸುತ್ತೋಲೆ ಪ್ರಕಟಿಸಿರುವ ಎನ್​ಎಂಸಿ, ಕಳೆದ ವರ್ಷ ನವೆಂಬರ್​ನಲ್ಲೇ ಈ ಪರಿಷ್ಕೃತ ನಿಯಮ ಜಾರಿಗೆ ಬಂದಿದೆ. ಕೋವಿಡ್ ಸಂಕಷ್ಟದ ಕಾರಣ ವಿದೇಶದಲ್ಲಿ ವ್ಯಾಸಂಗ ಪೂರ್ಣಗೊಳಿಸಲು ಇಂಟರ್ನ್​ಶಿಪ್ ಮಾಡ ಲಾಗದೇ ಇದ್ದವರಿಗೆ ಅವಕಾಶ ನೀಡಲಾಗಿತ್ತು. ಇದನ್ನು ಈಗ ಯೂಕ್ರೇನ್​ನಿಂದ ವಾಪಸ್ ಬಂದವರಿಗೂ ಅನ್ವಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದೆ.

ತಾತ್ಕಾಲಿಕ ಕದನ ವಿರಾಮ: ಮರಿಯೋಪೋಲ್ ಮತ್ತು ವೊಲ್ನೊವಖಾ ಪಟ್ಟಣಗಳಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದಕ್ಕಾಗಿ ಶನಿವಾರ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾ ತಿಳಿಸಿದೆ. ಬೆಳಗ್ಗೆ 10 ಗಂಟೆಯಿಂದ ಏಳು ಗಂಟೆಗಳ ಕಾಲ ಇಲ್ಲಿ ಕದನ ವಿರಾಮ ಚಾಲ್ತಿಗೆ ಬಂದಿತ್ತು. ಮರಿಯೋಪೋಲ್ ಪಟ್ಟಣದಲ್ಲಿ 4.50 ಲಕ್ಷ ಜನರಿ ಇದ್ದು, ಎಲ್ಲರನ್ನೂ ಮಾನವೀಯ ನೆಲೆಯಲ್ಲಿ ಸ್ಥಳಾಂತರಿಸುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮೇಯರ್ ವದ್ಯಮ್ ಬಾಯ್ಚೆನ್ಕೊ ಮಾಡಿದ ಮನವಿ ಮೇರೆಗೆ ರಷ್ಯಾ ಸೇನೆ ಈ ಕ್ರಮ ತೆಗೆದುಕೊಂಡಿದೆ. ಆದಾಗ್ಯೂ, ರಷ್ಯಾ ಸೇನೆ ದಾಳಿ ಮುಂದುವರಿಸಿದೆ. ಕದನ ವಿರಾಮವನ್ನು ಅದು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ.

ಯುರೋಪ್​ನಲ್ಲಿ ಬೃಹತ್​ಪ್ರಮಾಣದ ಸೈಬರ್ ದಾಳಿ: ರಷ್ಯಾ ವಿರುದ್ಧ ಪಾಶ್ಚಾತ್ಯ ರಾಷ್ಟ್ರಗಳು ಒಗ್ಗೂಡುತ್ತಿರುವಾಗಲೇ ಯುರೋಪ್​ನಲ್ಲಿ ಭಾರಿ ಪ್ರಮಾಣದ ಸೈಬರ್ ದಾಳಿ ನಡೆದಿದೆ. ಆರೆಂಜ್ ಸಂಸ್ಥೆಯ ಪ್ರಕಾರ ಅದರ ಸ್ಯಾಟಲೈಟ್ ಇಂಟರ್​ನೆಟ್ ಸೇವೆಯ 9000 ಚಂದಾದಾರರು ಸೈಬರ್ ದಾಳಿಗೆ ಒಳಗಾಗಿದ್ದರು. ಯುಟೆಲ್​ಸ್ಯಾಟ್​ನ ಬಿಗ್​ಬ್ಲೂ ಸ್ಯಾಟಲೈಟ್ ಇಂಟರ್​ನೆಟ್ ಸೇವೆಯ 40,000 ಚಂದಾದಾರರು ಸೈಬರ್ ದಾಳಿಯ ಸಂತ್ರಸ್ತರಾಗಿದ್ದರು. ಸೆಂಟ್ರಲ್ ಯೂರೋಪ್ ಮತ್ತು ಜರ್ಮನಿಯ 5,800 ವಿಂಡ್ ಟರ್ಬೆನ್​ಗಳು ಕೆಲಕಾಲ ಕೆಲಸ ಸ್ಥಗಿತಗೊಳಿಸಿದ್ದವು. ಇವುಗಳ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 11 ಗಿಗಾವಾಟ್ಸ್ ಎಂದು ವರದಿಯಾಗಿದೆ.

ಶಂಕಿತ ಗೂಢಚರನ ಹತ್ಯೆ: ಶಂಕಿತ ರಷ್ಯಾ ಗೂಢಚರ ಡೆನಿಸ್ ಕಿರೀವ್​ನನ್ನು ಶನಿವಾರ ಕಿಯೆವ್​ನ ಕೇಂದ್ರ ಭಾಗದಲ್ಲಿ ಪೆಚೆರ್​ಸ್ ಕೋರ್ಟ್​ನ ಪ್ರವೇಶದ್ವಾರದ ಸಮೀಪ ಹತ್ಯೆ ಮಾಡಲಾಗಿದೆ. ಈತ ರಷ್ಯಾ ಜತೆಗಿನ ಶಾಂತಿ ಮಾತುಕತೆಯ ನಿಯೋಗದ ಸದಸ್ಯನಾಗಿದ್ದ ಮತ್ತು ಯೂಕ್ರೇನ್ ಮಾಜಿ ಅಧ್ಯಕ್ಷ ವಿಕ್ಟರ್ ಯನುಕೋವ್​ಯಿುಚ್​ನ ಸಹಚರ ಎಂದು ಯೂಕ್ರೇನ್​ನ ಸೆಕ್ಯುರಿಟಿ ಸರ್ವೀಸ್ ತಿಳಿಸಿದೆ. ಎರಡು ಸುತ್ತಿನ ಮಾತುಕತೆಯಲ್ಲಿ ಯಾವುದೇ ಫಲ ಕಂಡುಬಂದಿಲ್ಲ. ಹೀಗಾಗಿ ರಷ್ಯಾ ಮತ್ತು ಯೂಕ್ರೇನ್ ನಡುವೆ ಮೂರನೇ ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿದೆ.

ಸಂಘರ್ಷ ಪೀಡಿತ ರ್ಖಾವ್​ನಲ್ಲಿದ್ದ ಎಲ್ಲ ಭಾರತೀಯರು ಸುರಕ್ಷಿತ ಸ್ಥಳಕ್ಕೆ ಹೊರಟಿದ್ದು, ಸುಮಿಯಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದೇ ಸವಾಲಿನ ಕಾರ್ಯ ಆಗಿದೆ. | ಅರಿಂದಮ್ ಬಾಗ್ಚಿ ವಿದೇಶಾಂಗ ಸಚಿವಾಲಯದ ವಕ್ತಾರ -

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net