

ಲಂಡನ್: ಮಹಾಮಾರಿ ಕರೊನಾ ವೈರಸ್ನಿಂದ ಪಾರಾಗಲು ಔಷಧ ಕಂಡು ಹಿಡಿಯುವಲ್ಲಿ ಅನೇಕ ರಾಷ್ಟ್ರಗಳು ಬಿಜಿಯಾಗಿವೆ. ಕೆಲವು ರಾಷ್ಟ್ರಗಳು ಕ್ಲೀನಿಕಲ್ ಪ್ರಯೋಗ ನಡೆಸುತ್ತಿದ್ದು, ಕೆಲವು ಔಷಧಗಳ ಮೇಲೆ ಆಶಾದಾಯಕ ಫಲಿತಾಂಶವು ಬಂದಿದೆ. ಆದರೆ, ಈವರೆಗೂ ವಿಶ್ವ ಆರೋಗ್ಯ ಸಂಸ್ಥೆ ಯಾವ ಔಷಧಕ್ಕೂ ಅಧಿಕೃತ ಮನ್ನಣೆ ನೀಡಿಲ್ಲ.
ಇದರ ನಡುವೆ ಆಘಾತಕಾರಿ ಘಟನೆಯೊಂದು ನಡೆದಿದ್ದು, ಯುನೈಟೆಡ್ ಕಿಂಗ್ಡಮ್ನ ಔಷಧ ಕಂಪನಿ ಅಸ್ಟ್ರಾ ಝೆನೆಕಾ ನೀಡಿದ ಔಷಧಿಯಿಂದ ಸ್ವಯಂ ಸೇವಕರೊಬ್ಬರಲ್ಲಿ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿರುವುದರಿಂದ ತನ್ನ ರ್ಯಾಂಡಮ್ ಕ್ಲೀನಿಕಲ್ ಟ್ರಯಲ್ಗೆ ಸ್ವಯಂಪ್ರೇರಿತ ವಿರಾಮ ನೀಡುತ್ತಿದ್ದೇವೆಂದು ಅಸ್ಟ್ರಾ ಝೆನೆಕಾ ಕಂಪನಿ ಮಂಗಳವಾರ ಹೇಳಿದೆ.
ಅಸ್ಟ್ರಾ ಝೆನೆಕಾ ಕಂಪನಿಯು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜತೆ ಸೇರಿ ಕರೊನಾಗೆ ಔಷಧವನ್ನು ಅಭಿವೃದ್ಧಿ ಪಡಿಸುತ್ತಿದೆ. ಕರೊನಾ ಔಷಧಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ಇದು ಮುಂಚೂಣಿಯ ಪಾತ್ರವನ್ನು ವಹಿಸಿದ್ದು, ಈಗಾಗಲೇ ರ್ಯಾಂಡಮ್ ಕ್ಲೀನಿಕಲ್ ಟ್ರಯಲ್ ಅನ್ನು ಕಂಪನಿ ನಡೆಸುತ್ತಿದೆ.
ಟ್ರಯಲ್ ವೇಳೆ ಒರ್ವ ಸ್ವಯಂ ಸೇವಕನಿಗೆ ನೀಡಿದ ಔಷಧದಿಂದ ವಿವರಿಸಲಾಗದ ಕಾಯಿಲೆ ಬಂದಿದೆ. ಹೀಗಾಗಿ ಟ್ರಯಲ್ಗೆ ವಿರಾಮ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಿ, ನಾವು ಪ್ರಯೋಗಗಳ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತೇವೆಂದು ಕಂಪನಿಯ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುಧೀರ್ಘ ಕ್ಲೀನಿಕಲ್ ಟ್ರಯಲ್ನಲ್ಲಿ ಕೆಲವೊಮ್ಮೆ ಅನಾರೋಗ್ಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಅದನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ರೋಗಿಯು ಎಲ್ಲಿದ್ದಾನೆ? ಅಥವಾ ಅವರ ಅನಾರೋಗ್ಯದ ಸ್ವರೂಪ ಮತ್ತು ತೀವ್ರತೆ ಕುರಿತು ತಕ್ಷಣವೇ ಯಾವುದೂ ಸ್ಪಷ್ಟವಾಗಿಲ್ಲ. ಕ್ಲಿನಿಕಲ್ ಪ್ರಯೋಗಗಳ ಸಮಯದಲ್ಲಿ ಹಿಡಿತ ಸಾಧಿಸುವುದು ಸುಲಭವಲ್ಲ. ಆದರೆ, ಕೋವಿಡ್ -19 ಲಸಿಕೆ ಪ್ರಯೋಗಕ್ಕಾಗಿ ಇದು ಮೊದಲ ಬಾರಿಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಕರೊನಾ ಔಷಧ ಕಂಡುಹಿಡಿಯುವಲ್ಲಿ ಮೂರನೇ ಹಂತದ ಟ್ರಯಲ್ ನಡೆಡಸುತ್ತಿರುವ 9 ಕಂನಿಗಳಲ್ಲಿ ಅಸ್ಟ್ರಾ ಝೆನೆಕಾ ಕಂಪನಿಯು ಒಂದು. ಇದೇ ಕಂಪನಿ ಅಮೆರಿಕದಲ್ಲಿ ಆಗಸ್ಟ್ 31 ರಂದು 30,000 ಸ್ವಯಂಸೇವಕರನ್ನು ಟ್ರಯಲ್ಗೆ ಡಜನ್ಗಟ್ಟಲೆ ವೆಬ್ಸೈಟ್ಗಳ ಮೂಲಕ ದಾಖಲಿಸಲು ಪ್ರಾರಂಭಿಸಿತು. (ಏಜೆನ್ಸೀಸ್)