

ಲಂಡನ್: ಕರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸ್ವಸುರಕ್ಷತಾ ಸಾಧನಗಳು ಅತ್ಯಗತ್ಯವಾಗಿ ಬೇಕಾಗುತ್ತದೆ. ಗುಣಮಟ್ಟದ ಕೈಗವಸು, ಮಾಸ್ಕ್, ನಿಲುವಂಗಿ (ಗೌನ್)ಗಳನ್ನು ಅವರಿಗೆ ಒದಗಿಸುವುದು ಸರ್ಕಾರಗಳ ಕರ್ತವ್ಯ.
ಆದರೆ ಕರೊನಾ ವೈರಸ್ ವ್ಯಾಪಕವಾಗಿ ಪ್ರಸರಣ ಆಗುತ್ತಿರುವಾಗ ಈ ಪಿಪಿಇ(ವೈಯಕ್ತಿಕ ಸುರಕ್ಷತಾ ಸಾಧನಗಳು) ಕಿಟ್ಗಳ ಕೊರತೆಯೂ ಎದುರಾಗಿದೆ. ಅದೆಷ್ಟೋ ವೈದ್ಯರು ಪಿಪಿಇ ಕಿಟ್ಗಳಿಲ್ಲದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ತನ್ಮೂಲಕ ತಮ್ಮ ಜೀವವನ್ನೇ ಅಪಾಯದಲ್ಲಿ ಇಟ್ಟಿದ್ದಾರೆ.
ಬ್ರಿಟನ್ನಲ್ಲಿ ಕೂಡ ವೈದ್ಯಕೀಯ ಸಿಬ್ಬಂದಿಗೆ ಸ್ವರಕ್ಷಣಾ ನಿಲುವಂಗಿ (ಗೌನ್)ಯ ಕೊರತೆ ಎದುರಾಗಿದ್ದು, ಅಲ್ಲಿನ ಆರೋಗ್ಯ ಇಲಾಖೆ ವೈದ್ಯರಿಗೆ ಒಂದು ಬದಲಿ ಮಾರ್ಗಗಳನ್ನು ಕಂಡುಕೊಳ್ಳುವಂತೆ ಸಲಹೆ ನೀಡಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಬ್ರಿಟನ್ನಲ್ಲಿ ಆರೋಗ್ಯ ಸಿಬ್ಬಂದಿಗೆ ಅಗತ್ಯ ಇರುವ ಉದ್ದನೆಯ ಸ್ವರಕ್ಷಣಾ ನಿಲುವಂಗಿಯ ಕೊರತೆ ಉಂಟಾಗಿದೆ. ಶುಕ್ರವಾರ 55,000 ಗೌನ್ಗಳನ್ನು ಆಮದು ಮಾಡಿಕೊಳ್ಳಲಾಗಿದ್ದರೂ ಇದು ಸಾಕಾಗುತ್ತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬ್ರಿಟನ್ನ ಬಹುತೇಕ ಆಸ್ಪತ್ರೆಗಳಲ್ಲಿ ಈ ರಕ್ಷಣಾ ಗೌನ್ಗಳು ಲಭ್ಯವಿಲ್ಲ. ಪೂರೈಕೆ ಆಗುತ್ತಿಲ್ಲ. ಹೀಗಿರುವಾಗ ಇಂಗ್ಲೆಂಡ್ ಸಾರ್ವಜನಿಕ ಆರೋಗ್ಯ ಇಲಾಖೆ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಿದ್ದು, ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡುವಾಗ ಜಲನಿರೋಧಕವಾದ, ಶಸ್ತ್ರಚಿಕಿತ್ಸಾ ಗೌನ್ಗಳನ್ನೇ ಬಳಸಿ ಎಂದು ಹೇಳಿದೆ. ಅಷ್ಟೇ ಅಲ್ಲ, ಪ್ಲಾಸ್ಟಿಕ್ ಏಪ್ರನ್ಗಳನ್ನೂ ಉಪಯೋಗಿಸಬಹುದು. ಬೇರೆ ಆಸ್ಪತ್ರೆಗಳಲ್ಲಿ ಹೆಚ್ಚಿಗೆ ಇದ್ದರೆ ಅದನ್ನು ತರಿಸಿಕೊಳ್ಳಬಹುದು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ ಎಂದು ವರದಿಯಾಗಿದೆ.
ಅದೆಷ್ಟರ ಮಟ್ಟಿಗೆ ಕೊರತೆ ಕಾಡುತ್ತಿದೆ ಎಂದರೆ, ಏಕ-ಬಳಕೆ ಗೌನ್ಗಳನ್ನು ಮರು ಬಳಕೆ ಮಾಡಿ ಎಂದು ವೈದ್ಯರು, ನರ್ಸ್ಗಳಿಗೆ ಸರ್ಕಾರ ಸೂಚಿಸುತ್ತಿದೆ. ಈ ಮಾರ್ಗಸೂಚಿಗಳ ಬಗ್ಗೆ ವೈದ್ಯಕೀಯ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿ, ಇದನ್ನು ಬದಲಿಸಿ ಎಂದು ಮನವಿ ಮಾಡಿದ್ದರೂ ಆರೋಗ್ಯ ಇಲಾಖೆ ಮಾನ್ಯ ಮಾಡುತ್ತಿಲ್ಲ.(ಏಜೆನ್ಸೀಸ್)