ಉಜ್ವಲ್ ನಿಕಮ್, ಮೀನಾಕ್ಷಿ ಜೈನ್ ಸೇರಿ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ| Rajya Sabha

Rajya Sabha
Published on

ನವದೆಹಲಿ: ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಹಿರಿಯ ವಕೀಲ ಉಜ್ವಲ್ ನಿಕಮ್, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್ ಮತ್ತು ರಾಜಕೀಯ ದಾಳಿಯಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡಿರುವ ಕೇರಳ ಬಿಜೆಪಿ ನಾಯಕ ಸಿ. ಸದಾನಂದನ್ ಮಾಸ್ಟರ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ.

ಶನಿವಾರ ತಡರಾತ್ರಿ ಅಧಿಸೂಚನೆ ಹೊರಡಿಸಲಾಗಿದ್ದು, ನಾಲ್ವರನ್ನು ಮೇಲ್ಮನೆಗೆ ರಾಷ್ಟ್ರಪತಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಸಂವಿಧಾನದ 80 (1)ಎ ವಿಧಿಯಡಿ ನೀಡಲಾದ ವಿಶೇಷ ಅಧಿಕಾರದಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ನಾಲ್ವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಅದರಲ್ಲಿ ಉಜ್ವಲ್ ನಿಕಮ್ ಪ್ರಸಿದ್ಧ ವಕೀಲರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಲಾಗಿತ್ತು. ಅವರು ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್​​ನನ್ನು ಗಲ್ಲಿಗೇರಿಸುವಂತೆ ಮಾಡಲು ಸರ್ಕಾರದ ಪರ ವಾದ ಮಂಡಿಸಿದ್ದರು. ಉಜ್ವಲ್ ನಿಕಮ್ ಅವರನ್ನು ಮುಂಬೈ ನಾರ್ತ್ ಸೆಂಟ್ರಲ್ ನಿಂದ ಕಣಕ್ಕಿಳಿಸಲಾಗಿತ್ತು.

ಹರ್ಷವರ್ಧನ್ ಶ್ರಿಂಗ್ಲಾ ರಾಯಭಾರಿಯಾಗಿ ಕೆಲಸ ನಿರ್ವಹಿಸಿದ್ದು, ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ನಮ್ಮ ಜಿ-20 ಅಧ್ಯಕ್ಷತೆಯಲ್ಲೂ ನೆರವು ನೀಡಿದ್ದಾರೆ.

(ಏಜೆನ್ಸೀಸ್)

ಸದಾನಂದನ್ ಮಾಸ್ಟರ್ ಅವರ ಜೀವನವು ಧೈರ್ಯ ಮತ್ತು ಅನ್ಯಾಯಕ್ಕೆ ತಲೆಬಾಗಲು ನಿರಾಕರಿಸುವ ಪ್ರತಿರೂಪವಾಗಿದೆ ಎಂದು ಮೋದಿ ಹೇಳಿದ್ದಾರೆ. ಶಿಕ್ಷಕ, ಸಮಾಜ ಸೇವಕರಾಗಿಯೂ ಅವರ ಶ್ರಮ ಶ್ಲಾಘನೀಯವಾಗಿದೆ.ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರಪತಿ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ಸಾಮಾಜಿಕ ಜಾಲತಾಣ ಎಕ್ಸ್ ಸಂದೇಶದಲ್ಲಿ ಶುಭ ಹಾರೈಸಿದ್ದಾರೆ.

ಡಾ. ಮೀನಾಕ್ಷಿ ಜೈನ್ ಅವರನ್ನು ರಾಜ್ಯಸಭೆಗೆ ರಾಷ್ಟ್ರಪತಿ ನಾಮನಿರ್ದೇಶನ ಮಾಡಿರುವುದು ಅತೀವ ಸಂತಸದ ವಿಷಯವಾಗಿದೆ. ಇತಿಹಾಸಗಾರ್ತಿ, ಸಂಶೋಧಕರಾಗಿರುವ ಅವರು, ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಹೋನ್ನತ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net