

ಬೆಳಗಾವಿ; ಕಠಿಣ ಪರಿಶ್ರಮ, ಛಲ ಇದರೊಂದಿಗೆ ವರ್ಷಗಟ್ಟಲೇ ಓದು, ಕೋಚಿಂಗ್, ದೈನಂದಿನ ವೆಚ್ಚಗಳನ್ನು ನಿಭಾಯಿಸಬೇಕಾದ ಕಠಿಣ ಸವಾಲುಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುವ ಅಭ್ಯರ್ಥಿಗಳು ಎದುರಿಸಬೇಕಾಗುತ್ತದೆ. ಇದಕ್ಕೆ ಆರ್ಥಿಕ ಬೆಂಬಲವೂ ಅಷ್ಟೇ ಅಗತ್ಯವಾಗಿರುತ್ತದೆ. ಹಣಕಾಸಿನ ಮುಗ್ಗಟ್ಟಿನ ನಡುವೆಯೂ ಗುರಿ ಸಾಧಿಸಬಹುದು ಎಂಬುದಕ್ಕೆ ಈ ಬಾರಿ ಐಎಫ್ಎಸ್ನಲ್ಲಿ 129ನೇ ರ‍್ಯಾಂಕ್ ಪಡೆದ ಪ್ರವೀಣ್ ಜಾಧವ ನಿದರ್ಶನವಾಗಿದ್ದಾರೆ. ಕನಸಿನ ದಾರಿಯುದ್ಧಕ್ಕೂ ಸಂಘರ್ಷ ಹೋರಾಟಗಾಥೆ ಇವರದ್ದು. ಗ್ರಾಮೀಣ ಭಾಗದವರು, ಆರ್ಥಿಕ ಅಡಚಣೆ ಮೊದಲಾದ ಕೀಳರಿಮೆ ಹೋಗಲಾಡಿಸಿ ಆತ್ಮವಿಶ್ವಾಸದ ಮಾರ್ಗವನ್ನು ‘ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ’ದ ಸಂಡೇ ಗೆಸ್ಟ್ ಆಗಿ ತೆರೆದಿಟ್ಟಿದ್ದಾರೆ.
ಆತ್ಮವಿಶ್ವಾಸ, ದೃಢನಿಲುವು ತೆಳೆಯುವುದರ ಜತೆಗೆ ಅಗತ್ಯ ಮಾರ್ಗದರ್ಶನ ದೊರೆತಲ್ಲಿ ಸಾಧನೆಯ ಹಾದಿ ಸುಗಮ ಎನ್ನುವುದಕ್ಕೆ ಪ್ರವೀಣ ನಮ್ಮೆದುರಿನ ಸಾಕ್ಷಿ. ಸೂಕ್ತ ಮಾರ್ಗದರ್ಶನದ ಕೊರತೆಯಿತ್ತು. ಹೀಗಾಗಿ ಎಂಎಸ್ಸಿ ಅಗ್ರಿ ಕೊನೆಯ ವರ್ಷದಲ್ಲಿದ್ದಾಗ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುವಂತಾಯಿತು. ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿ ದೆಹಲಿ, ಬೆಂಗಳೂರಿನಲ್ಲಿದ್ದು ಅಗತ್ಯ ಓದಿಗೆ ಹವಣಿಸಿದರೂ ಆರ್ಥಿಕ ಸಂಕಷ್ಟ ಇವರನ್ನು ತಂದೆ-ತಾಯಿ ದುಡಿಯುವುದಕ್ಕಾಗಿ ವಲಸೆಬಂದ ಪುಣೆಗೆ ತಂದು ನಿಲ್ಲಿಸಿತು. ಹಣಕಾಸಿನ ಬಿಕ್ಕಟ್ಟಿನಿಂದಾಗಿ ಯಾವುದೇ ಕೋಚಿಂಗ್‌ನತ್ತ ಮುಖಮಾಡದೆ ‘ಸೆಲ್ಫ್ ಸ್ಟಡಿ’ ಎಂಬ ತಪಸ್ಸಿಗೆ ಕುಳಿತರು. 2022ರಲ್ಲಿ ಆರಂಭವಾದ ಇವರ ಹೋರಾಟಕ್ಕೆ 2024ರಲ್ಲಿ ಯಶಸ್ಸು ದೊರೆತಿದೆ.
ಮೊದಲಿಗೆ ಕೆಲ ಸ್ನೇಹಿತರಿಂದ ಯುಪಿಎಸ್‌ಸಿ ಬಗ್ಗೆ ಮಾಹಿತಿ ತಿಳಿದುಕೊಂಡ ಪ್ರವೀಣ್‌ಗೆ ಓದಿನದ್ದಕ್ಕೂ ಯೂಟ್ಯೂಬ್ ಆಸರೆಯಾಗಿತ್ತು. ಎನ್‌ಇಸಿಆರ್‌ಟಿಇ ಪುಸ್ತಕಗಳನ್ನು ಅಭ್ಯಸಿಸಿ, ಓದಿಗೆ ಸೂಕ್ತವಾದ ಮೂಲ ಪುಸ್ತಕಗಳನ್ನು ಆಯ್ದುಕೊಂಡು ಅಧ್ಯಯನ ಮುಂದುವರಿಸಿದರು. ಓದಿನ ಜತೆ ಪುನರ್ಮನನ ಹಾಗೂ ಮಾಕ್ ಟೆಸ್ಟ್ ಮತ್ತು ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವುದು ಅಗತ್ಯ ಎನ್ನುವುದು ಇವರ ಸಲಹೆ. ಪ್ರಿಲಿಮ್ಸ್ ನಮಲ್ಲಿನ ಸಾಮಾನ್ಯ ಜ್ಞಾನವನ್ನು ಪರೀಕ್ಷಿಸಿದರೆ, ಮುಖ್ಯ ಪರೀಕ್ಷೆ ವಿಶ್ಲೇಷಣಾ ಸಾಮರ್ಥ್ಯವನ್ನು ಅವಲೋಕಿಸುತ್ತದೆ. ಆದ್ದರಿಂದ ಅಧ್ಯಯನ ಮುಂದುವರಿದಂತೆಲ್ಲ ಇನ್ನಷ್ಟು ಆಳವಾದ ಓದು ಅಗತ್ಯ ಎನ್ನುವುದು ಪ್ರವೀಣ್ ಅಭಿಪ್ರಾಯ.
ತಂದೆ-ತಾಯಿ ಅನಕ್ಷರಸ್ಥರು. ಮಕ್ಕಳು ತಮ್ಮಂತೆ ಆಗಬಾರದೆನ್ನುವ ಕಾರಣಕ್ಕೆ ನಮ್ಮನ್ನು ಪ್ರಾರಂಭದಿಂದಲೂ ವಸತಿ ನಿಲಯಗಳಲ್ಲೇ ಇಟ್ಟು ಓದಿಸಿದರು. ಅದಕ್ಕೆ ಚ್ಯುತಿ ತಾರದಂತೆಯೇ ಅಭ್ಯಸಿಸಿದ್ದೇವೆ. ಅದರಲ್ಲಿ ಎರಡೂ ಮಾತಿಲ್ಲ. ಆದರೆ, ಫೈನಾನ್ಸಿಯಲ್ ಥ್ರೇಟ್ ಆಗಾಗ ಕಳವಳವನ್ನುಂಟು ಮಾಡುತ್ತಿತ್ತು. ಆದರೆ ಸ್ನೇಹಿತರು ಹಾಗೂ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಜೆಆರ್ಎಫ್ನಿಂದ ಬಂದ ಹಣ ನನ್ನ ಅಧ್ಯಯನಕ್ಕೆ ಆಸರೆಯಾಯಿತು ಎನ್ನುತ್ತಾರೆ ಪ್ರವೀಣ್. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಖಾಡಾಪುರದ ಮೂಲದವರಾದ ಇವರು ಪ್ರಾಥಮಿಕ ಶಿಕ್ಷಣವನ್ನು ಖಾಡಾಪುರದಲ್ಲಿ, ಪ್ರೌಢಶಿಕ್ಷಣವನ್ನು ಹಿಡಕಲ್ ಡ್ಯಾಂ ಹಾಗೂ ಬಿಎಸ್ಸಿ ಅಗ್ರಿ ಪದವಿಯನ್ನು ವಿಜಯಪುರ ಮತ್ತು ಎಂಎಸ್ಸಿ ಅಗ್ರಿಯನ್ನು ಪಂಜಾಬ್‌ನಲ್ಲಿ ಪೂರ್ಣಗೊಳಿಸಿದ್ದಾರೆ. ರಸ್ತೆ ಕಾಮಗಾರಿಯಲ್ಲಿ ಕಾರ್ಯನಿರ್ವಹಿಸುವ ತಂದೆ ಹರೀಷ್ ಜಾಧವ, ಮೆಸ್‌ನಲ್ಲಿ ಅಡುಗೆ ಕೆಲಸಕ್ಕೆ ಹೋಗುವ ತಾಯಿ ಮೀನಾಕ್ಷಿ ಹಾಗೂ ಅಕ್ಕ ಶೀತಲ್ ಅವರನ್ನು ಒಳಗೊಂಡ ಚಿಕ್ಕ ಕುಟುಂಬ ಇವರದ್ದು.
ದಿನಪತ್ರಿಕೆಗಳತ್ತ ಒಲವಿರಲಿ. ಹಲವಾರು ಪುಸ್ತಕಗಳನ್ನು ಓದುವ ಅಗತ್ಯವಿಲ್ಲ. ನೀವು ಆಯ್ಕೆ ಮಾಡುವ ಪುಸ್ತಕವನ್ನು ಅಚ್ಚುಕಟ್ಟಾಗಿ ಓದಿದರೆ ಸಾಕು. ಜತೆಗೆ ಕೊನೆಯಲ್ಲಿ ಸ್ಮಾರ್ಟ್ ವರ್ಕ್‌ನತ್ತ ಗಮನ ನೀಡುವುದು ಸೂಕ್ತ. ಯುಪಿಎಸ್ಸಿಗೆ ಅಗತ್ಯವಾಗಿ ಪದವಿ ಹಂತದಲ್ಲೇ ಸರಿಯಾದ ಚೌಕಟ್ಟನ್ನು ರೂಪಿಸಿಕೊಂಡರೆ ಒಳಿತು ಎನ್ನುವುದು ಇವರ ಸಲಹೆ.
ಗ್ರಾಮೀಣ ಭಾಗದ ಕೀಳರಿಮೆ, ಉತ್ತಮ ಹಿನ್ನೆಲೆ ಇಲ್ಲದಿರುವುದು ಮೊದಲಾದವುಗಳ ಬಗ್ಗೆ ಯೋಚನೆ ಬೇಡ. ಪರಿಶ್ರಮಪಟ್ಟರೆ ಇಲ್ಲಿ ಯಾವುದು ದೊಡ್ಡದಲ್ಲ. ಮೊದಲಿಗೆ ಇನ್ನೊಬ್ಬರಿಗಿಂತ ನಿಮ್ಮ ಸಾಮರ್ಥ್ಯವನ್ನು ನೀವೇ ಅರಿತುಕೊಂಡು ಉನ್ನತ ಹುದ್ದೆಗಳತ್ತ ಹೆಜ್ಜೆ ಹಾಕಬೇಕು. ಎನ್‌ಸಿಆರ್‌ಟಿಇ ಪುಸ್ತಕಗಳೊಂದಿಗೆ ಓದಿನ ಪ್ರಾರಂಭವಾಗಲಿ. ಯಾವುದೇ ಪರಿಸ್ಥಿಯಲ್ಲೂ ಮುಂದಿಟ್ಟ ಹೆಜ್ಜೆಯನ್ನು ಹಿಂತೆಗೆದುಕೊಳ್ಳಬೇಡಿ.
ಎರಡೂ ಹಂತಗಳ ಪರೀಕ್ಷೆಗೆ ತಯಾರಿ ನಡೆಸುತ್ತ ಪ್ರಚಲಿತ ವಿದ್ಯಮಾನಗಳತ್ತ ಗಮನ ಹರಿಸಲೇಬೇಕು. ಅದಕ್ಕೆ ದಿನಪತ್ರಿಕೆಗಿಂದ ದೊಡ್ಡ ಆಯುಧ ಮತ್ತೊಂದಿಲ್ಲ. ಮುಖ್ಯವಾಗಿ ಮೇನ್ಸ್ ನಂತರ ಎದುರಾಗುವ ಸಂದರ್ಶನದಲ್ಲಿ ಸಂಪೂರ್ಣವಾಗಿ ಡಿಟೇಲ್ಡ್ ಅಪ್ಲಿಕೇಷನ್ ಫಾರ್ಮ್ ನಮೂದಿಸಿದ ವಿಷಯದ ಆಧಾರಿತವಾಗಿ ಪ್ರಶ್ನೆಗಳನ್ನೆ ಕೇಳುತ್ತಾರೆಂದು ಕುಳಿತುಕೊಳ್ಳುವುದು ತರವಲ್ಲ. ಬದಲಾಗಿ ಅಲ್ಲಿ ಪ್ರಚಲಿತ ವಿದ್ಯಮಾನದ ಮೌಲ್ಯಮಾಪನವೂ ನಡೆಯುತ್ತದೆ. ಆದ್ದರಿಂದ ಸಂದರ್ಶನಕ್ಕೆ ಪ್ರಚಲಿತ ವಿದ್ಯಮಾನದ ಕುರಿತು ಅಗತ್ಯವಾಗಿ ತಿಳಿದುಕೊಳ್ಳಬೇಕು ಎನ್ನುತ್ತಾರೆ ಪ್ರವೀಣ್.
ಭೀಮಸಿ ಕೋಳೆಪ್ಪನವರ