

UI Release: ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್, ನಟ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಬಹು ನಿರೀಕ್ಷಿತ “UI” ಚಿತ್ರ ಇದೇ ಡಿಸೆಂಬರ್ 20ರಂದು ಜಾಗತಿಕವಾಗಿ ತೆರೆ ಕಾಣಲು ಸಜ್ಜಾಗಿದ್ದು, ಈಗಾಗಲೇ ಚಿತ್ರಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ. ಕರ್ನಾಟಕದಲ್ಲಿ ಬುಕ್ಕಿಂಗ್ಸ್ ಓಪನ್ ಮಾಡಿದ್ದೇ ತಡ 24 ಗಂಟೆಗಳ ಅವಧಿಯಲ್ಲಿ ಬೆಳಗ್ಗಿನ ಎಲ್ಲಾ ಚಿತ್ರಮಂದಿರದ ಶೋಗಳ ಟಿಕೆಟ್ಗಳು ಖರೀದಿಯಾಗಿವೆ. ರಾಜ್ಯ, ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಭಾರೀ ಸದ್ದು ಮಾಡುತ್ತಿರುವ ಉಪ್ಪಿ ಸಿನಿಮಾ, ಇದೀಗ ಭರ್ಜರಿ ಪ್ರದರ್ಶನದತ್ತ ಎದುರುನೋಡುತ್ತಿದೆ. ಚಿತ್ರವು ವಿಶ್ವಾದ್ಯಂತ 2000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಎಲ್ಲೆಲ್ಲಿ, ಯಾವ ಥಿಯೇಟರ್ಗಳಲ್ಲಿ ರಿಲೀಸ್ ಆಗಲಿದೆ ಎಂಬುದರ ಪಟ್ಟಿಯೂ ಹೊರಬಿದ್ದಿದೆ.
ಪೋಸ್ಟರ್, ಹಾಡು, ಟೀಸರ್ ಹಾಗೂ ವಾರ್ನರ್ ಮೂಲಕ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ವೀಕ್ಷಿಸಲು ಉಪೇಂದ್ರ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಡಿ.20ಕ್ಕೆ ಕೇವಲ ಒಂದೇ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಸಿನಿಪ್ರಿಯರು ಆನ್ಲೈನ್ ಟಿಕೆಟ್ ಬುಕ್ಕಿಂಗ್ಗಳತ್ತ ಮುಖಮಾಡಿದ್ದಾರೆ. ಕೇವಲ ಎರಡೇ ಎರಡು ಅಕ್ಷರದಲ್ಲಿ ಚಿತ್ರಕ್ಕೆ ಶೀರ್ಷಿಕೆ ಇಟ್ಟಿರುವ ಉಪೇಂದ್ರ, ಟೈಟಲ್ನಲ್ಲಿ ಮಾತ್ರ ವಿಭಿನ್ನತೆ ಮತ್ತು ವಿಶೇಷತೆಯನ್ನಿಡದೆ, ಕಥಾಹಂದರದಲ್ಲಿ ಹಲವು ಕುತೂಹಲಕಾರಿ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನು ಬೆಳ್ಳಿ ಪರದೆಯ ಮುಖೇನ ಸಿನಿರಸಿಕರ ಮುಂದಿಡುವ ಪ್ರಯತ್ನ ಮಾಡಿದ್ದಾರೆ.
ಪ್ರಸ್ತುತ ಕೆನಡಾ, ಆಸ್ಟ್ರೇಲಿಯಾ, ಅಮೆರಿಕ, ನ್ಯೂಜಿಲೆಂಡ್, ಯುಎಇ-ಜಿಸಿಸಿ ನಗರಗಳಲ್ಲಿನ ಚಿತ್ರಮಂದಿರಗಳಲ್ಲಿ ಯುಐ ಸಿನಿಮಾ ಆಯಾ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ ಎಂದು ಉಪ್ಪಿ ತಮ್ಮ ಜಾಲತಾಣದ ಅಧಿಕೃತ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ವಿದೇಶದಲ್ಲಿ ಯಾವ ನಗರದ ಥಿಯೇಟರ್ಗಳಲ್ಲಿ ಯಾವ ಭಾಷೆಯಲ್ಲಿ ತೆರೆ ಕಾಣಲಿದೆ ಎಂಬುದನ್ನು ತಿಳಿಸಿದ್ದಾರೆ. ಸದ್ಯ ಅಭಿಮಾನಿಗಳಲ್ಲಿ ಯುಐ ಕ್ರೇಜ್ ಹೆಚ್ಚಿದ್ದು, ಸಿನಿಮಾ ಹೇಗಿರಲಿದೆ? ಎಂಬ ಕುತೂಹಲ ಮೂಡಿದೆ. ಚಿತ್ರ ನೋಡಿದ ಬಳಿಕ ಪ್ರೇಕ್ಷಕರು ಕೊಡುವ ಪ್ರತಿಕ್ರಿಯೆ ಏನು? ಎಂಬುದನ್ನು ಕಾದು ತಿಳಿಯಬೇಕಿದೆ.