AI ಸಂಚಲನದ ಮಧ್ಯೆ 'UI' ಅಬ್ಬರ! ಉಪ್ಪಿ ಹೇಳಲಿರುವ ಭವಿಷ್ಯದ ಸಿನಿಮಾಗೆ ಹೆಚ್ಚಿದೆ ಕಾತರ

ವಿಜಯವಾಣಿ - 2024-12-17T184244.096
Published on

UI Release: ಪ್ರಸ್ತುತ ಬಿಡುಗಡೆಗೂ ಮುನ್ನವೇ ಯಾವುದಾದರೂ ಒಂದು ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಂದರೆ ಅದು ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್ ಉಪೇಂದ್ರ​ ನಟಿಸಿ, ನಿರ್ದೇಶಿಸಿರುವ 'ಯುಐ'. ತಮ್ಮ ಪ್ರತಿ ಚಿತ್ರದ ಕಥೆಯಲ್ಲಿಯೂ ವಿಭಿನ್ನತೆ ಹಾಗೂ ವಿಶೇಷತೆ ಜತೆಗೆ ಒಂದು ಆಳವಾದ ಸಂದೇಶ ಅಡಗಿಸಿಡುವ ಉಪೇಂದ್ರ, ಇದೀಗ 2040ರಲ್ಲಿ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಿರುತ್ತದೆ, ಯಾವೆಲ್ಲಾ ರೀತಿ ಜನರು ಬದಲಾಗಲಿದ್ದಾರೆ ಎಂಬುದನ್ನು ಇದೊಂದು ಸಿನಿಮಾದಲ್ಲಿ ತೋರಿಸಿದ್ದಾರೆ. ಈಗಾಗಲೇ ಚಿತ್ರದ 'ವಾರ್ನರ್' ಮೂಲಕ ಸಿನಿರಸಿಕರಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಉಪ್ಪಿ, ಯುಐ ನಿಮ್ಮನ್ನು ಮತ್ತಷ್ಟು ಗೊಂದಲಕ್ಕೆ ದೂಡಲಿದೆ ಎಂಬ ಸುಳಿವನ್ನು ಸಾರಿಬಿಟ್ಟಿದ್ದಾರೆ.

'ಯುಐ' ಸದ್ದು-ಗದ್ದಲ

ಬಹುನಿರೀಕ್ಷಿತ 'ಯುಐ' ಇದೇ ಡಿ.20ರಂದು ಜಾಗತಿಕವಾಗಿ ತೆರೆ ಕಾಣಲು ಸಜ್ಜಾಗಿದೆ. ನಿನ್ನೆಯಷ್ಟೇ ಚಿತ್ರದ ಟಿಕೆಟ್​ ಬುಕ್ಕಿಂಗ್​ಗಳು ತೆರೆಯಲಾಗಿದ್ದು, ಆನ್​ಲೈನ್ ಮೂಲಕ ಪ್ರೇಕ್ಷಕರು ಟಿಕೆಟ್​ ಬುಕ್ ಮಾಡಿಕೊಳ್ಳಲು ಅವಕಾಶವಿತ್ತು. ಆದರೆ, ಈಗಿಲ್ಲ. ಕಾರಣ, ಬುಕ್ಕಿಂಗ್​ ಕೌಂಟರ್​ ತೆರೆದ ಕೆಲವೇ ಕ್ಷಣಗಳಲ್ಲಿ ಬಹುತೇಕ ಚಿತ್ರಮಂದಿರಗಳ ಬೆಳಗ್ಗಿನ ಶೋ ಟಿಕೆಟ್​ ಸಂಪೂರ್ಣವಾಗಿ ಖರೀದಿಯಾಗಿದೆ. ಹೌಸ್​ಫುಲ್​ ಎಂಬ ಬೋರ್ಡ್​ಗಳು ಯುಐ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ಮುಂದೆ ರಾರಾಜಿಸಲಿವೆ. ಸದ್ಯ ರಿಲೀಸ್​ಗೂ ಮುನ್ನವೇ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುವ ಉಪ್ಪಿ ಚಿತ್ರಕ್ಕೆ ಇದೀಗ ಇತರೆ ಚಿತ್ರರಂಗದ ನಟರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜನರ ತಲೆಯಲ್ಲಿ ಪ್ರಶ್ನೆಗಳ ಸುರಿಮಳೆ

ಸಿನಿಮಾದ ಪ್ರಚಾರ ಕಾರ್ಯಕ್ಕೆ ಆಂಧ್ರಪ್ರದೇಶ, ತೆಲಂಗಾಣಕ್ಕೆ ತೆರಳಿದ್ದ ಉಪೇಂದ್ರ ಮತ್ತು ಚಿತ್ರತಂಡಕ್ಕೆ ತೆಲುಗು ಅಭಿಮಾನಿಗಳು ವಿಶೇಷ ಅಭಿಮಾನ ತೋರಿದ್ದಾರೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸದ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ತೆಲುಗು ನಟ ನಾಗಾರ್ಜುನ, ಅಲ್ಲು ಅರ್ಜುನ್​ ಸೇರಿದಂತೆ ಸ್ಟಾರ್​ ನಟರಿಂದ ಉಪ್ಪಿಯ ಯುಐಗೆ ಶುಭಾಶಯಗಳು ವ್ಯಕ್ತವಾಗಿವೆ. ಇದರ ಜತೆಗೆ ಬಾಲಿವುಡ್​ನ ಹಿರಿಯ ನಟ ಅಮೀರ್ ಖಾನ್ ಚಿತ್ರದ 'ವಾರ್ನರ್' ವೀಕ್ಷಿಸಿ, ಮೆಚ್ಚಿ ಮಾತನಾಡಿದ್ದಾರೆ. ಒಟ್ಟಾರೆ ಯುಐ ಸಿನಿಮಾ ಅಬ್ಬರ ಬಿಡುಗಡೆಗೂ ಮುನ್ನವೇ ಜೋರಿದ್ದು, ರಿಲೀಸ್ ಆದ ನಂತರ ಯಾವ ಮಟ್ಟಿಗೆ ಸದ್ದು ಮಾಡಲಿದೆ? ಜನರ ತಲೆಯಲ್ಲಿ ಯಾವೆಲ್ಲಾ ಪ್ರಶ್ನೆಗಳು ಕಾಡುವಂತೆ ಮಾಡುತ್ತದೆ? ಎಂಬುದನ್ನು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net