ಸ್ಟೈಲಿಶ್​ ಸ್ಟಾರ್​ಗೆ ತಪ್ಪದ ಸಂಕಷ್ಟ! ಸುಪ್ರೀಂ ಕೋರ್ಟ್​ ಮೆಟ್ಟಿಲೇರಲು ಸಜ್ಜಾದ ತೆಲಂಗಾಣ ಪೊಲೀಸರು

ವಿಜಯವಾಣಿ - 2024-12-17T174731.019
Published on

ಹೈದರಾಬಾದ್​: ಡಿ.04ರಂದು ಪ್ಯಾನ್ ಇಂಡಿಯಾ ಸ್ಟಾರ್ ನಟ​ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ (Pushpa 2) ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳಾ ಅಭಿಮಾನಿ ಮೃತಪಟ್ಟರು. ಈ ಘಟನೆಯಡಿ ನಟನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ತೆಲಂಗಾಣ ಪೊಲೀಸರು, ಡಿ.13ರ ಮಧ್ಯಾಹ್ನ ಅಲ್ಲು ಅರ್ಜುನ್​ರನ್ನು ಬಂಧಿಸಿ, ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ಅದೇ ದಿನದ ಸಂಜೆ ವೇಳೆಗೆ ನಟನಿಗೆ ತೆಲಂಗಾಣ ಕೋರ್ಟ್ ಮಧ್ಯಂತರ ಜಾಮೀನು ನೀಡಿ, ರಿಲೀಸ್​ ಮಾಡುವಂತೆ ತಿಳಿಸಿತು. ಸದ್ಯ ಈ ಪ್ರಕರಣ ಅಲ್ಲಿಗೆ ಮುಗಿಯುವಂತೆ ಕಾಣುತ್ತಿಲ್ಲ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಯೇ ಬಲವಾದ ಸಾಕ್ಷಿ.

ಸುಪ್ರೀಂ ಕೋರ್ಟ್​ ಮೆಟ್ಟಿಲು

ವರದಿಯ ಪ್ರಕಾರ, ತೆಲಂಗಾಣ ಪೊಲೀಸ್ ಅಧಿಕಾರಿಗಳು, ಕಾಲ್ತುಳಿತ ಪ್ರಕರಣದಲ್ಲಿ ನಟನಿಗೆ ಹೈಕೋರ್ಟ್‌ ನೀಡಿದ ಜಾಮೀನು ಆದೇಶವನ್ನು ಪ್ರಶ್ನಿಸಿ ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಲು ಸಜ್ಜಾಗಿದ್ದಾರೆ. ತೆಲಂಗಾಣ ಪೊಲೀಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಹೋಗಲಿರುವ ಕಾರಣ ಅಲ್ಲು ಅರ್ಜುನ್​ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಶುಕ್ರವಾರ ರಾತ್ರಿಯೇ ಆದೇಶ ನೀಡಿದರೂ ಅಧಿಕಾರಿಗಳು ಬಿಡುಗಡೆ ಮಾಡಿರಲಿಲ್ಲ. ಇದಕ್ಕೆ ತೀವ್ರ ಕಿಡಿಕಾರಿದ್ದ ನಟನ ವಕೀಲರು, "ಹೈಕೋರ್ಟ್ ಆದೇಶವು ತುಂಬಾ ನಿರ್ದಿಷ್ಟ ಹಾಗೂ ಸ್ಪಷ್ಟವಾಗಿದೆ. ಜೈಲು ಅಧಿಕಾರಿಗಳು ಜಾಮೀನು ಪ್ರತಿ ಪಡೆದ ತಕ್ಷಣವೇ ಆರೋಪಿಯನ್ನು ಬಿಡುಗಡೆ ಮಾಡಬೇಕು. ಸ್ಪಷ್ಟ ಆದೇಶದ ಹೊರತಾಗಿಯೂ ಇವರು ಅಲ್ಲು ಅರ್ಜುನ್​ರನ್ನು ಬಿಡಲಿಲ್ಲ. ಇದು ಕಾನೂನುಬಾಹಿರವಾಗಿ ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದಿದ್ದರು.

ಅಲ್ಲು ಅರ್ಜುನ್​ ಭಾವುಕ

ಇನ್ನು ಜೈಲಿನಿಂದ ಹೊರಬಂದ ಬೆನ್ನಲ್ಲೇ ತಮ್ಮ ಕುಟುಂಬದವರ ಬಳಿ ದುಃಖ ಹಂಚಿಕೊಂಡ ಅಲ್ಲು ಅರ್ಜುನ್​, "ಮಹಿಳೆಯ ಸಾವು ಅತ್ಯಂತ ದುರದೃಷ್ಟಕರ. ಈ ಸಂದರ್ಭದಲ್ಲಿ ಅಭಿಮಾನಿಗಳು ಸೇರಿದಂತೆ ನಾನು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುವೆ. ಈ ಘಟನೆ ಅತೀವ ನೋವು ತಂದಿದೆ. ಮೃತ ರೇವತಿ ಕುಟುಂಬದೊಂದಿಗೆ ನಾನಿದ್ದೇನೆ. ಅವರ ಕುಟುಂಬಕ್ಕೆ ಏನೇ ಸಹಾಯ ಬೇಕಿದ್ದರೂ ನಾನು ಮಾಡಲು ತಯಾರಿದ್ದೇನೆ" ಎಂದು ಭರವಸೆಯ ಮಾತುಗಳನ್ನಾಡಿದರು.

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಸಂಧ್ಯಾ ಚಿತ್ರಮಂದಿರದಲ್ಲಿ ಹಮ್ಮಿಕೊಂಡಿದ್ದ ‘ಪುಷ್ಪ-2’ ಚಿತ್ರದ ಪ್ರೀಮಿಯರ್​ ಶೋ ವೇಳೆ ಉಂಟಾದ ಕಾಲ್ತುಳಿತದಲ್ಲಿ ಹೈದರಾಬಾದ್​ ಮೂಲದ ರೇವತಿ (39) ಮೃತಪಟ್ಟರೆ, ಪುತ್ರ ತೇಜ್ (9) ಗಂಭೀರವಾಗಿ ಗಾಯಗೊಂಡಿದ್ದರು. ಪತ್ನಿಯನ್ನು ಕಳೆದುಕೊಂಡ ರೇವತಿ ಪತಿ ಭಾಸ್ಕರ್​, ಘಟನೆ ನೆನೆದು ಕಣ್ಣೀರಿಟ್ಟಿದ್ದರು. ಇದೇ ವಿಷಯಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ್ದ ಮೃತ ರೇವತಿ ಪತಿ, ನನ್ನ ಹೆಂಡತಿ ಸಾವಿಗೆ ಚಿತ್ರತಂಡದವರೇ ಕಾರಣ ಎಂದು ಹೇಳಿ, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ಬೆನ್ನತ್ತಿದ ಪೊಲೀಸರು, ಅಲ್ಲು ಅರ್ಜುನ್​ರನ್ನು ಬಂಧಿಸಿ, ಕೋರ್ಟ್​ ಮುಂದೆ ಹಾಜರುಪಡಿಸಿದ್ದರು. ಆದರೆ, ನಟನಿಗೆ ಹೈಕೋರ್ಟ್ ನೀಡಿದ ಜಾಮೀನನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸಲು ಪೊಲೀಸರು ಸಜ್ಜಾಗಿರುವುದು ಅಲ್ಲು ಅರ್ಜುನ್​ಗೆ ಇನ್ನೂ ಸಂಕಷ್ಟ ತಪ್ಪಿಲ್ಲ ಎಂಬುದನ್ನು ಸೂಚಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net