ಬೀರೂರಿಗೆ ಮುಗಿಯದ ಗೋಳಾದ ಯುಜಿಡಿ

08 BIRUR 01
Published on

ಬೀರೂರು: ಬೀರೂರಿನ ಲಿಂಗದಹಳ್ಳಿ ರಸ್ತೆಯಲ್ಲಿ ಯುಜಿಡಿ ಮ್ಯಾನ್‌ಹೋಲ್‌ನಿಂದ ಕಳೆದ ಮೂರು ತಿಂಗಳಿನಿಂದ ಕೊಳಚೆ ನೀರು ರಸ್ತೆ ಮೇಲೆ ಹರಿಯುತ್ತಿದ್ದರೂ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಬೀರೂರಿನಿಂದ ಪ್ರೇಕ್ಷಣೀಯ ಸ್ಥಳಗಳಾದ ಕಲ್ಲತ್ತಿಗಿರಿ, ದತ್ತಪೀಠ, ಮುಳ್ಳಯ್ಯನಗಿರಿ ಸೇರಿದಂತೆ ಹೆಬ್ಬೆಫಾಲ್ಸ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿ ದಿನ ನೂರಾರು ಪ್ರವಾಸಿಗರು ಸಂಚರಿಸುತ್ತಾರೆ. ಪ್ರತಿದಿನ ಹತ್ತಾರುಬಸ್, ಲಾರಿ ಸೇರಿದಂತೆ ಭಾರಿ ವಾಹನಗಳು ಸಂಚರಿಸುತ್ತವೆ. ಇದರಿಂದ ರಸ್ತೆ ಮ್ಯಾನ್‌ಹೋಲ್‌ನ ಕಟ್ಟಡ ಕುಸಿದಿದೆ.
ಮಾರ್ಗದಕ್ಯಾಂಪ್, ಅಶೋಕನಗರ, ಬಳ್ಳಾರಿ ಕ್ಯಾಂಪ್, ಹೊಸಳಮ್ಮ ಬಡಾವಣೆ, ಇಂದಿರಾನಗರ, ಉಪ್ಪಾರಕ್ಯಾಂಪ್ ಸೇರಿದಂತೆ ಮೊದಲಾದ ಬಡಾವಣೆಗಳಲ್ಲಿ ಸಾವಿರಾರು ಜನರು ನಾಗರಿಕರು ಕೂಡ ಇದೇ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ ರಸ್ತೆಯಲ್ಲಿ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆ ಕುರಿತು ಪುರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಮ್ಯಾನ್‌ಹೋಲ್ ದಾಟಿಕೊಂಡೇ ಓಡಾಡುವ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇದನ್ನು ನೋಡಿದರೂ ನೋಡದಂತೆ ಸುಮ್ಮನಿದ್ದಾರೆ. ಪಟ್ಟಣದ ಏಳು ವಾರ್ಡ್‌ಗಳಿಗೆ ಓಡಾಡಲು ಇರುವುದು ಒಂದೇ ಮುಖ್ಯ ರಸ್ತೆ. ಏಳು ವಾರ್ಡ್‌ನ ಸದಸ್ಯರೂ ಈ ಸಮಸ್ಯೆ ಸರಿಪಡಿಸಲು ನಿರ್ಲಕ್ಷೃ ವಹಿಸಿದ್ದಾರೆ. ಯಜಿಡಿ ದುರ್ನಾತದಿಂದ ಸ್ಥಳೀಯರಲ್ಲಿ ಸಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಪಟ್ಟಣದಾದ್ಯಂತ ಯುಜಿಡಿ ಮ್ಯಾನ್‌ಹೋಲ್ ಸಂಪರ್ಕವಿಲ್ಲದೆ ರಸ್ತೆಯಲ್ಲಿ ತುಂಬಿ ಹರಿಯುತ್ತಿದೆ. ಕೊಳಚೆ ಮತ್ತು ನೀರು ಸರಬರಾಜು ಮಂಡಳಿ ಅಥವಾ ಸ್ಥಳೀಯ ಪುರಸಭೆ ಸಂಪರ್ಕವಿಲ್ಲದ ಪೈಪ್ ಲಿಂಕ್‌ಗಳನ್ನು ಅಳವಡಿಸಿ ವ್ಯವಸ್ಥೆ ಸಮರ್ಪಕಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net