

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಯುಜಿಸಿಇಟಿ ಮತ್ತು ಯುಜಿನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಭಾನುವಾರ (ಸೆ.22) ಪ್ರಕಟಿಸಿದೆ.
ಸೀಟು ಹಂಚಿಕೆಯಾದ ಇಂಜಿನಿಯರಿಂಗ್ ಸೇರಿ ಇತರ ಕೋರ್ಸ್‌ಗಳ (ವೈದ್ಯಕೀಯ ಕೋರ್ಸ್ ಹೊರತುಪಡಿಸಿ) ಅಭ್ಯರ್ಥಿಗಳು ಸೆ.23ರ ಬೆಳಿಗ್ಗೆ 11ರಿಂದ ಸೆ.25ರ ರಾತ್ರಿ 11:59ರವರೆಗೆ ಚಾಯ್ಸ್ ಆಯ್ಕೆ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಪ್ರತಿ ಚಾಯ್ಸ್ನ ಪರಿಣಾಮವನ್ನು ಗಮನಿಸಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಚಾಯ್ಸ 1 ಅಥವಾ ಚಾಯ್ಸ 2 ನಮೂದಿಸಿದ ಸಿಇಟಿ ಅಭ್ಯರ್ಥಿಗಳು ಮಾತ್ರ ಸೆ.23ರಿಂದ 26ರವರೆಗೆ ಶುಲ್ಕ ಪಾವತಿಸಬೇಕು. ಚಾಯ್ಸ 1 ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ಶುಲ್ಕ ಪಾವತಿಸಿ ಸೆ.26ರೊಳಗೆ ಪ್ರವೇಶ ಪಡೆಯಬೇಕು ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್‌ಗಳಿಗೆ ಚಾಯ್ಸ್ ಇಲ್ಲ:
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್ ಕೋರ್ಸ್‌ಗಳಿಗೆ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದವರಿಗೆ ಯಾವುದೇ ಚಾಯ್ಸ್ ಲಭ್ಯವಿರುವುದಿಲ್ಲ. ಈ ಅಭ್ಯರ್ಥಿಗಳು ಸೆ.24ರಿಂದ 26ರವರೆಗೆ ಶುಲ್ಕ ಪಾವತಿಸಿ ಪ್ರವೇಶ ಪತ್ರ ಡಣ್‌ಲೋಡ್ ಮಾಡಿಕೊಂಡು ಆಯಾ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು. ಈ ಕೋರ್ಸ್‌ಗಳಿಗೆ ಹಿಂದಿನ ಸುತ್ತಿನಲ್ಲಿ ಪಾವತಿಸಿದ್ದ ಶುಲ್ಕವನ್ನು ಎರಡನೇ ಸುತ್ತಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ವೈದ್ಯಕೀಯ ಸೀಟಿಗೆ ಪಾವತಿಸಿದ್ದ ಕಾಷನ್ ಡಿಪಾಸಿಟ್ ಅನ್ನು ಈ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾಗಿದ್ದರೆ ಮಾತ್ರ ಹೊಂದಾಣಿಕೆ ಮಾಡಲಾಗುವುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮರುಪಾವತಿ ಮಾಡಲಾಗುವುದು. ಆದರೆ, ಹಂಚಿಕೆಯಾದ ಬೇರೆ ಕೋರ್ಸ್‌ಗಳಿಗೆ ಇದನ್ನು ಹೊಂದಾಣಿಕೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಂಚಿಕೆಯಾಗಿರುವ ವೈದ್ಯಕೀಯ ಸೀಟು ಬೇಡವೆನಿಸಿದಲ್ಲಿ ಸೆ.25ರ ಸಂಜೆ 5.30ರೊಳಗೆ ಕೆಇಎ ಕಚೇರಿಗೆ ಬಂದು ರದ್ದುಪಡಿಸಿಕೊಳ್ಳಬೇಕು. ಹೀಗೆ ರದ್ದುಪಡಿಸಿಕೊಂಡವರಿಗೆ ಆನ್‌ಲೈನ್ ಮಾಪ್ ಅಪ್ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಶುಲ್ಕ ಪಾವತಿಸಿದ ನಂತರ ಸೆ.24 ಮತ್ತು 25ರಂದು ಪ್ರಾಧಿಕಾರಕ್ಕೆ ಮೂಲ ದಾಖಲೆಗಳನ್ನು ಸಲ್ಲಿಸಬೇಕು ಎಂದು ವಿವರಿಸಿದ್ದಾರೆ.