

ಬೆಂಗಳೂರು ಯುಜಿಸಿಇಟಿ-2024 ಅಭ್ಯರ್ಥಿಗಳ ಮಾಹಿತಿಯನ್ನು ಜೂ.29ರಂದು ಪ್ರಕಟಿಸಿದ್ದು, ಇದರಲ್ಲಿ ತಪ್ಪು ಕಂಡುಬಂದಿದ್ದರೆ ಸರಿಪಡಿಸಿಕೊಳ್ಳಲು ಜು.4ರಿಂದ 6ರವರೆಗೆ ಮಲ್ಲೇಶ್ವರದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ಖುದ್ದು ಹಾಜರಾಗಿ ಸರಿಪಡಿಸಿಕೊಳ್ಳಬಹುದಾಗಿದೆ.
ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಯುಜಿಸಿಇಟಿ ಅರ್ಜಿಯಲ್ಲಿ ತಪ್ಪುಗಳನ್ನು ಎಸಗಿದ್ದರಿಂದ ವ್ಯತ್ಯಾಸಗಳಾಗಿರುವುದನ್ನು ಗಣನೆಗೆ ತೆಗೆದುಕೊಂಡು ಈ ಅಂತಿಮ ಆವಕಾಶ ನೀಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.
ಒಂದು ಲಕ್ಷಕ್ಕಿಂತ ಒಳಗಿನ ರ‌್ಯಾಂಕ್‌ನವರು ಜು.4ರಂದು, 1.8 ಲಕ್ಷಕ್ಕಿಂತ ಒಳಗಿನ ರ‌್ಯಾಂಕ್‌ನವರು ಜು.5ರಂದು ಹಾಗೂ 1.8 ಲಕ್ಷಕ್ಕಿಂತ ಮೇಲ್ಪಟ್ಟ ರ‌್ಯಾಂಕ್‌ನವರು ಜು.6ರಂದು ವೆಬ್ಸೈಟಿನಲ್ಲಿ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಖುದ್ದು ಹಾಜರಾಗಬೇಕು ಎಂದು ವಿವರಿಸಲಾಗಿದೆ.
ತಪ್ಪುಗಳನ್ನು ಗುರುತಿಸಿರುವ ಅಭ್ಯರ್ಥಿಗಳು ಯುಜಿಸಿಇಟಿ-2024ಕ್ಕೆ ಸಲ್ಲಿಸಿದ್ದ ಅರ್ಜಿ ಪ್ರತಿ, ಪ್ರವೇಶ ಪತ್ರ, ಅಗತ್ಯವಿರುವ ಎಲ್ಲ ಮೂಲ ದಾಖಲೆಗಳು ಮತ್ತು ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಬರಬೇಕು ಎಂದು ತಿಳಿಸಿದ್ದಾರೆ.
ಎಲ್ಲ ಮಾಹಿತಿ ಸರಿ ಇರುವವರು ಕೆಇಎಗೆ ಬರುವ ಅಗತ್ಯವಿಲ್ಲ. ಅಂತಹವರಿಗೆ ವೆರಿಫಿಕೇಶನ್ ಸ್ಲಿಪ್ ಡನ್‌ಲೋಡ್ ಮಾಡಿಕೊಳ್ಳಲು ಸದ್ಯದಲ್ಲಿಯೇ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.