

ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇದರ ವಿಡಿಯೋಗಳು ವೈರಲ್ ಆಗಿದ್ದು, ಉಗಾಂಡಾದ ಕೆಲವು ಮಕ್ಕಳು ಮನರಂಜನೆಗಾಗಿ ಮರದ ಆಟಿಕೆ ಬಂದೂಕು ಮತ್ತು ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸಿ ಮರುಸೃಷ್ಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬುಲೆಟ್ ತಗುಲಿದಾಗ ಟ್ರಂಪ್ ಅವರ ಮುಖಭಾವ, ಕೆಳಗೆ ಬಾಗಿದ ದೃಶ್ಯ, ಗುಪ್ತದಳದ ಸಿಬ್ಬಂದಿ ತಕ್ಷಣ ಅವರನ್ನು ಸುತ್ತುವರಿದು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದ ಘಟನೆಗಳನ್ನು ಉಗಾಂಡಾ ಮಕ್ಕಳು ಹಾಗೆಯೇ ಅಭಿನಯಿಸಿದ್ದಾರೆ.
ಈ ಗುಂಪಿನಲ್ಲಿ ಒಬ್ಬ ಹುಡುಗ ಮೈಕ್ ಮುಂದೆ ನಿಂತು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿತು. ಅವರ ಪಕ್ಕದಲ್ಲಿದ್ದ ಉಳಿದ ಮಕ್ಕಳು ರಹಸ್ಯ ಸೇವಾ ಸಿಬ್ಬಂದಿಯಾಗಿ ಬದಲಾದರು. ಇದೇ ಹುಡುಗ ಶೂಟಿಂಗ್ ವೇಳೆ ಟ್ರಂಪ್ ವೇದಿಕೆಯಿಂದ ಕೆಳಗಿಳಿದು ಮುಷ್ಟಿ ಬಿಗಿದುಕೊಂಡು ಹೋರಾಟ ಮಾಡಿ ಎಂದು ಕೂಗಿದಂತೆಯೇ ಮಾಡಿ ಗಮನ ಸೆಳೆದಿದ್ದಾನೆ.
ಸದ್ಯ ಈ ರಿಕ್ರಿಯೇಶನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ. ಇಂತಹ ಪ್ರವೃತ್ತಿಯು ಮಕ್ಕಳ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಕ್ಕಳ ಅಭಿನಯ ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.