ಯುಜಿ/ ಪಿಜಿ ಆಯುಷ್: ಡಿ.23ರಿಂದ ಕೊನೆ ಸುತ್ತಿನ ಸೀಟು ಹಂಚಿಕೆ

AYUSH
Published on

ಬೆಂಗಳೂರು: ಪ್ರಸಕ್ತ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಆಯುಷ್ ಕೋರ್ಸ್ ಗಳ ಪ್ರವೇಶಕ್ಕೆ ಕೊನೆ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ಕಲ್ಪಿಸಿದ್ದು, ಅರ್ಹ ಅಭ್ಯರ್ಥಿಗಳು ಡಿ.23ರಿಂದ ಕೋರ್ಸ್ ಶುಲ್ಕವನ್ನು ಮುಂಗಡವಾಗಿ ಪಾವತಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.

ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಈ ಕೋರ್ಸ್ ಗಳ ಪ್ರವೇಶಕ್ಕೆ ಡಿ.31ರವರೆಗೆ ಸಮಯ ನೀಡಿರುವ ಕಾರಣ ಹಂಚಿಕೆಯಾಗದೆ ಬಾಕಿ ಉಳಿದಿರುವ ಸೀಟುಗಳನ್ನು ಕೊನೆ ಸುತ್ತಿನಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.

ಸದ್ಯ ಯುಜಿ ಆಯುಷ್ ನಲ್ಲಿ 436 ಹಾಗೂ ಪಿಜಿ ಆಯುಷ್ ನಲ್ಲಿ 201 ಸೀಟು ಹಂಚಿಕೆಗೆ ಲಭ್ಯ ಇವೆ. ಇನ್ನೂ ಕೆಲವರು ಕಾಲೇಜುಗಳಿಗೆ ವರದಿ ಮಾಡಿಕೊಳ್ಳದಿದ್ದ ಪಕ್ಷದಲ್ಲಿ ಅಂತಹವರ ಸೀಟುಗಳನ್ನು ಕೂಡ ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದರು.

ವೇಳಾಪಟ್ಟಿ:

ಕೋರ್ಸ್ ಶುಲ್ಕ ಮುಂಗಡ ಪಾವತಿಗೆ ಡಿ.23ರಿಂದ 26ರವರೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಿದವರು ಡಿ.24ರಿಂದ 26ರವರೆಗೆ ಆಪ್ಷನ್ಸ್ ದಾಖಲಿಸಬೇಕು. ಡಿ. 26ರಂದು ಸಂಜೆ 6ಕ್ಕೆ ತಾತ್ಕಾಲಿಕ ಹಾಗೂ ಡಿ.27ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಡಿ.27ರಿಂದ 29ರವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, ಡಿ.30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಪ್ರಸನ್ನ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ಗೆ ಭೇಟಿ ನೀಡಬೇಕು ಎಂದು ಅವರು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net