ಗ್ರಾಮವಾಸ್ತವ್ಯಕ್ಕೆ ಬಿಜೆಪಿ ಸಂಕಲ್ಪ

Published on

ಉಡುಪಿ: ಮುಂದಿನ ಜಿಪಂ ಮತ್ತು ತಾಪಂ ಚುನಾವಣೆ ಹಿನ್ನಲೆಯಲ್ಲಿ ಪಕ್ಷ ಸಂಘಟನೆಗಾಗಿ ಮಾ.20ರಿಂದ ಗ್ರಾಮಾಂತರ ಪ್ರದೇಶದ 32 ಮಹಾಶಕ್ತಿ ಕೇಂದ್ರದಲ್ಲಿ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾ ಬಿಜೆಪಿ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್, ಪ್ರತೀ ದಿನ 3 ಗಂಟೆಗೆ 5-6 ಮಂದಿಯ ತಂಡ ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ವಾಸ್ತವ್ಯ ಹೂಡಲಿದೆ. ಸಾಯಂಕಾಲ 5ಕ್ಕೆ ಸಭಾ ಕಾರ್ಯಕ್ರಮ, ನಂತರ ಪೇಜ್ ಪ್ರಮುಖ್, ಸಕ್ರಿಯ ಕಾರ್ಯಕರ್ತರೊಂದಿಗೆ ಸಮಾಲೋಚನೆ, ಬೂತ್ ಸಮಿತಿ ಕಾರ್ಯವೈಖರಿ ಪರಿಶೀಲನೆ ನಡೆಯಲಿದೆ. 30 ಜಿಪಂ ಕ್ಷೇತ್ರದಲ್ಲಿ 26 ಕ್ಷೇತ್ರ ಹಾಗೂ 85 ತಾಪಂ ಕ್ಷೇತ್ರದಲ್ಲಿ 70ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಹೊಂದಲಾಗಿದೆ ಎಂದರು.
ಕಾಂಗ್ರೆಸ್ ಪಿತೂರಿ ವಿರುದ್ಧ ಪಾದಯಾತ್ರೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಹಿಂದಿನಿಂದ ಪಿತೂರಿ ನಡೆಸುತ್ತಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಲು ಎಪ್ರಿಲ್ 2ನೇ ವಾರ ಬೈಂದೂರಿನಿಂದ ಉಡುಪಿವರೆಗೆ ಜಿಲ್ಲಾ ಬಿಜೆಪಿ ವತಿಯಿಂದ 3 ದಿನದ ಪಾದಯಾತ್ರೆ ನಡೆಸಲಾಗುವುದು. 3 ರಿಂದ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಶಿಲ್ಪಾ ಸುವರ್ಣ, ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಸಹ ವಕ್ತಾರ ಶಿವಕುಮಾರ್, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net