ಉದ್ಧವನ ಶ್ರೀಕೃಷ್ಣ ಭಕ್ತಿ

untitled-design-1-6887b5f0e7e16
Published on
ಉದ್ಧವ ಬೃಹಸ್ಪತ್ಯಾಚಾರ್ಯರ ಅವತಾರ. ಬೃಹಸ್ಪತ್ಯಾಚಾರ್ಯ ರಲ್ಲಿಯೇ ಅಧ್ಯಯನ ಮಾಡಿದವನೂ ಕೂಡ. ಬೃಹಸ್ಪತಿಯ ಅವತಾರವೂ ಹೌದು ಅವರ ಶಿಷ್ಯನೂ ಹೌದು. ಬೃಹಸ್ಪತ್ಯಾಚಾರ್ಯರೇ ದ್ರೋಣಾಚಾರ್ಯರು.ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಶ್ರೀಕೃಷ್ಣನ ಆದೇಶದಂತೆ ಬೃಹಸ್ಪತ್ಯಾಚಾರ್ಯರು ದ್ರೋಣಾಚಾರ್ಯರಾಗಿ ಅವತಾರ ಮಾಡಿದ್ದಾರೆ. ಯೂದ್ಧಭೂಮಿಯಲ್ಲಂತೂ ಶ್ರೀಕೃಷ್ಣನ ಆದೇಶ -‘ನೀವು ಕೌರವರ ಪಕ್ಷದಲ್ಲಿ ಇದ್ದು ಅವರಿಗೆ ಧೈರ್ಯ ತುಂಬಿ. ಅವರೆಲ್ಲರ ಸಂಘಟನೆಯನ್ನು ಮಾಡಿ ಅವರೆಲ್ಲರೂ ಯುದ್ಧದಲ್ಲಿ ಮರಣ ಹೊಂದುವಂತೆ ಮಾಡಬೇಕು’ ಎಂದು.

ಆ ಭಗದಿಚ್ಛೆಯಂತೆ ಕೌರವರ ಪಕ್ಷದಲ್ಲಿ ನಿಂತು ಯುದ್ಧ ಮಾಡಿ ಆ ಮೂಲಕ ಭಗವಂತನ ಸೇವೆಯನ್ನು ಮಾಡಿದ್ದರೂ, ‘ಪರಮಾತ್ಮನಿಗೆ ನನ್ನ ಮೇಲೆ ಅಷ್ಟು ಪ್ರೀತಿಯಿಲ್ಲ, ನಾನು ಈ ಅವತಾರದೊಳಗೆ ಎದುರು ಪಕ್ಷದಲ್ಲಿ ಇದ್ದು ಯುದ್ದ ಮಾಡುತ್ತಿದ್ದೇನೆ. ದುರ್ಯೋಧನಾದಿಗಳ ಸಹವಾಸದಿಂದ ನಮ್ಮಲ್ಲಿ ಅಸುರಾವೇಶಾದಿಗಳು ಸಂಭವಿಸಿರುವ ಸಂದರ್ಭಗಳು ಇವೆ. ಅದಕ್ಕಾಗಿ ಕೇವಲ ಶ್ರೀಕೃಷ್ಣನ ಸೇವೆಗಾಗಿಯೇ ನಾನು ಬದುಕಬೇಕು’ ಎನ್ನುವ ಸಂಕಲ್ಪದಿಂದ ಮಾಡಿದ ಅವತಾರವೇ ಉದ್ಧವ. ಕೇವಲ ಶ್ರೀಕೃಷ್ಣನ ಸೇವೆಗೆ ಅವತಾರ ಮಾಡಿದಂತಹ ಮಹಾಭಗವದ್ಭಕ್ತ.

ಐದು ವರ್ಷದ ಬಾಲಕ ಇದ್ದಾಗ ಅವನಿಗೆ ತಾಯಿಯು ಊಟಕ್ಕೆ ಎಂದು ಕರೆದರೆ ‘ಇನ್ನೂ ದೇವರ ಪೂಜೆ ಆಗಿಲ್ಲ. ನಾನು ಊಟಕ್ಕೆ ಬರುವುದಿಲ್ಲ’ ಎಂದು ಹೇಳಿದನಂತೆ. ಹೀಗೆ ಪುಟ್ಟ ಬಾಲಕನಾಗಿ ಇದ್ದಾಗಲೇ ಶ್ರೀಕೃಷ್ಣನ ಪೂಜೆಯಲ್ಲಿ ನಿರತನಾದ ಮಹಾಭಗವದ್ಭಕ್ತ ಉದ್ಧವ. ನಾರಾಯಣ ಪಂಡಿತಾಚಾರ್ಯರು ಯೋಗದೀಪಿಕೆಯಲ್ಲಿ ಹೇಳುತ್ತಾರೆ: ಚಿಕ್ಕಮಕ್ಕಳಿ ದ್ದಾಗಲೇ ಅವರಿಗೆ ದೇವರ ಪೂಜೆ ಮಾಡಲು ಕಲಿಸಿ. ದೇವರ ಪೂಜೆಗಳ ಪದಾರ್ಥಗಳನ್ನೇ ಆಟಿಕೆ ಸಾಮಾನುಗಳನ್ನಾಗಿ ಕೊಡಿ. ಯಾವುದೋ ಲೌಕಿಕ ವಸ್ತುಗಳನ್ನು ಆಟಕ್ಕೆ ನೀಡಬೇಡಿ ಎನ್ನುತ್ತಾರೆ. ಮಾತ್ರವಲ್ಲದೆ, ರಾಮಕೃಷ್ಣರಂತಹ ದೇವರ ಪ್ರತಿಮೆಗಳನ್ನೇ ಮಕ್ಕಳಿಗೆ ಆಟವಾಡಲು ನೀಡಿ, ಮುಂದೆ ಅದೇ ಸ್ವಭಾವ ಬೆಳೆದು ದೊಡ್ಡವರಾದ ಮೇಲೂ ದೇವರ ಪೂಜೆಯನ್ನು ಮಾಡಲು ಪ್ರವೃತ್ತರಾಗುತ್ತಾರೆ ಎಂದು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net