ಉದ್ಧವನಿಗೆ ಕೃಷ್ಣಸೇವಾ ಭಾಗ್ಯ

untitled-design-1-6890f7ed4f718
Published on
ಉದ್ಧವನಿಗೆ ಶ್ರೀಕೃಷ್ಣ, ‘ಉದ್ಧವ, ನನ್ನಲ್ಲಿಯೇ ಮನಸ್ಸಿಟ್ಟು ನನ್ನನ್ನೇ ಚಿಂತನೆ ಮಾಡುತ್ತಾ ಪ್ರಾಣವನ್ನು ಬಿಡುವುದಕ್ಕೂ ಸಿದ್ಧರಾದ ಭಕ್ತರಿದ್ದಾರೆ. ಬೃಂದಾವನದೊಳಗೆ ಗೋಕುಲದೊಳಗೆ ಇರುವ ಎಲ್ಲ ಸ್ತ್ರೀಯರು ಪುರುಷರು ನನ್ನ ಮೇಲೆ ಅಪಾರ ವಿಶ್ವಾಸವನ್ನು ಇಟ್ಟಿದ್ದಾರೆ.

ನೀನು ಅವರಿಗೆ ನಾನು ಹೇಳುವ ಒಂದು ವಾರ್ತೆಯನ್ನು ಮುಟ್ಟಿಸಿ ಅವರಿಗೆ ಸಾಂತ್ವನ ಹೇಳಿ ಬರಬೇಕು’ ಎಂದು ಹೇಳುತ್ತಾನೆ. ಆಗ ಉದ್ಧವ ಅಂದುಕೊಳ್ಳುತ್ತಾನೆ, ಕೃಷ್ಣನಿಗಾಗಿ ಪ್ರಾಣವನ್ನೇ ಕೊಡುವ, ಶ್ರೀಕೃಷ್ಣನಿಗೆ ಅರ್ಪಣೆ ಮಾಡಿಕೊಂಡಂತಹ ಭಗವದ್ಭಕ್ತರನ್ನು ಕಣ್ಣಿನಿಂದ ನೋಡುವ ಭಾಗ್ಯ ಸಿಗುತ್ತಿದೆ, ಅದೇ ಒಂದು ದೊಡ್ಡ ಮಹಾಭಾಗ್ಯ ಎಂದು. ಶ್ರೀಮದ್ಭಗವದ್ಗೀತೆಯ ಹತ್ತನೆಯ ಅಧ್ಯಾಯದಲ್ಲಿ ‘ತುಷ್ಯಂತಿ ಚ ರಮಂತಿ ಚ’ ಎಂದು ಹೇಳುತ್ತಾರೆ. ಶ್ರೀಕೃಷ್ಣನ ಭಕ್ತರಿಗೆ ಬೇರೆ ಏನೇ ಕೆಲಸ ಇದ್ದರೂ ಅದೆಲ್ಲವನ್ನೂ ಬಿಟ್ಟು ಪರಸ್ಪರ ಭಗವಂತನ ಕಥೆಗಳನ್ನು ಹೇಳುತ್ತಾ, ತಾವು ಅನುಭವಿಸಿದ ಮಹಿಮೆ ಯನ್ನು ಗಾನಮಾಡುತ್ತ ಆನಂದವನ್ನು ಪಡುತ್ತಾರೆ.

ವಿಷ್ಣುಭಕ್ತರು ಭಗವದ್ಭಕ್ತರು ಎಂದರೆ ಹಾಗೆಯೇ. ಎಷ್ಟು ಅನಿವಾರ್ಯವೋ ಅಷ್ಟು ಮಾತನಾಡುತ್ತಾರೆ. ಕೆಲವರು ಪುರಾಣಕ್ಕೆ ಕುಳಿತಾಗ ಊರಿನ ಎಲ್ಲ ಸುದ್ಧಿಯನ್ನು ಮಾತನಾಡುತ್ತಿರುತ್ತಾರೆ. ಅಂತಹವರು ಬೇರೆ ಸಮಯದಲ್ಲಿ ದೇವರ ಬಗ್ಗೆ ಏನು ಮಾತನಾಡಲು ಸಾಧ್ಯ? ಆದ್ದರಿಂದ ಪ್ರತಿನಿತ್ಯ ಹೆಂಡತಿ, ಮಕ್ಕಳು, ಗೆಳೆಯರು ಇವರೆಲ್ಲರ ಜೊತೆಗೆ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಮಾತನಾಡುವುದಕ್ಕೆ ಆರಂಭಿಸಬೇಕು. ಆ ವೇಳೆ ದೇವರ ಒಂದೆರಡು ಮಹಿಮೆಗಳನ್ನಾದರೂ ಮೆಲಕು ಹಾಕಬೇಕು. ಉದ್ಧವ ಹೊರಟಿದ್ದಾನೆ.

ಸಾಯಂಕಾಲ ಆಗಿದೆ. ಎಲ್ಲ ಕಡೆಯೂ ಗೋವುಗಳು ಬರುತ್ತಿವೆ. ಆ ಗೋಧೂಳಿಯೊಳಗೆ ಇವನ ಬಂಗಾರದ ರಥ ಮುಚ್ಚಿಹೋಗಿದೆ. ಅಷ್ಟು ಗೋಸಂಪತ್ತಿ ಇರುವ ಸ್ಥಳ ವೃಂದಾವನ. ಗೋವುಗಳನ್ನು ನೋಡುತ್ತ ಉದ್ಧವ ಸಂತೋಷ ಪಟ್ಟಿದ್ದಾನೆ. ಎಲ್ಲ ಗೋಪಾಲಕರೂ, ಗೋಪಿಕಾಸ್ತ್ರೀಯರು ಮನೆ ಮನೆಗಳಲ್ಲಿ ಭಗವಂತನ ಕಥೆಗಳನ್ನು ಹಾಡುತ್ತ ಕುಳಿತಿದ್ದಾರೆ. ಅದು ದಾಸಸಾಹಿತ್ಯ. ಇದು ಬಹಳ ಪ್ರಾಚೀನ. ನರಹರಿತೀರ್ಥರು, ಪುರಂದರ ದಾಸರೇ ಮೊದಲಾದವರು ಇದನ್ನು ಮತ್ತೆ ಪ್ರಚುರಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net