

ರಾಘವ ಶರ್ಮ ನಿಡ್ಲೆ ನವದೆಹಲಿ
ಕರೊನಾ ವೈರಸ್ ಸೃಷ್ಟಿಸಿರುವ ಆರೋಗ್ಯ ಎಮರ್ಜೆನ್ಸಿ ನಡುವೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಒಳಗೊಂಡ ಮಹಾರಾಷ್ಟ್ರದ ಮಹಾಮೈತ್ರಿ ಸರ್ಕಾರದ ಮುಖ್ಯಮಂತ್ರಿ, ಶಿವಸೇನೆ ನಾಯಕ ಉದ್ಧವ್ ಠಾಕ್ರೆಗೆ ಹೊಸ ತಲೆನೋವು ಶುರುವಾಗಿದೆ. ನ.28ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಉದ್ಧವ್, ಅಂದು ರಾಜ್ಯ ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗಿರಲಿಲ್ಲ. ಯಾವುದೇ ಶಾಸಕೇತರ ವ್ಯಕ್ತಿ ಸಿಎಂ/ಡಿಸಿಎಂ/ಸಚಿವರಾಗಿ ನೇಮಕಗೊಂಡಲ್ಲಿ 6 ತಿಂಗಳ ಒಳಗಾಗಿ ಶಾಸಕರಾಗಿ ವಿಧಾನಮಂಡಲ ಪ್ರವೇಶಿಸಬೇಕಾಗುತ್ತದೆ. ಅದೇ ರೀತಿಯಾಗಿ, ಉದ್ಧವ್ ಮೇ 28ರ ಒಳಗಾಗಿ ಶಾಸಕರಾಗಬೇಕು. ಆದರೆ, ಕೋವಿಡ್-19ನಿಂದಾಗಿ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ, ನಾಮ ನಿರ್ದೇಶನದ ಮೂಲಕ ಪರಿಷತ್ ಪ್ರವೇಶಿಸಲು ಉದ್ಧವ್ ಯತ್ನಿಸುತ್ತಿದ್ದಾರೆ.
ಮೇ 28ರೊಳಗೆ ಶಾಸಕರಾಗದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯ. ಹೀಗಾಗಿಯೇ, ಡಿಸಿಎಂ ಅಜಿತ್ ಪವಾರ್ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟದ ಮುಖಂಡರು, ಉದ್ಧವ್ ಅವರನ್ನು ನಾಮ ನಿರ್ದೇಶನದ ಮೂಲಕ ಪರಿಷತ್ಗೆ ನೇಮಿಸಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಇದಾಗಿ 2 ವಾರ ಕಳೆದಿದ್ದರೂ, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮೌನ ತಳೆದಿರುವುದು ಮಹಾಮೈತ್ರಿಯನ್ನು ಚಿಂತೆಗೆ ದೂಡಿದೆ. ಒಂದುವೇಳೆ ಕೋವಿಡ್-19 ಇಲ್ಲದಿರುತ್ತಿದ್ದರೆ ಉಪ ಚುನಾವಣೆ ನಡೆದು ಉದ್ಧವ್ ಪರಿಷತ್ ಪ್ರವೇಶಿಸುವುದು ಬಹುತೇಕ ನಿಶ್ಚಿತವಾಗುತ್ತಿತ್ತು.
ಮೇ 28ರ ಒಳಗಾಗಿ ಚುನಾವಣೆಯಾದರೆ ಮಾತ್ರ ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ ಚುನಾವಣೆ ದೂರದ ಮಾತು. ಹಾಗಾದರೆ, ರಾಜೀನಾಮೆ ನೀಡಿ ಮತ್ತೋರ್ವ ಶಿವಸೇನೆ ನಾಯಕನನ್ನು ಸಿಎಂ ಸ್ಥಾನದಲ್ಲಿ ಉದ್ಧವ್ ಕೂರಿಸುತ್ತಾರಾ ಅಥವಾ ಕಾನೂನು ಹೋರಾಟದ ಮೂಲಕ ಸಿಎಂ ಸ್ಥಾನ ಉಳಿಸಿಕೊಳ್ಳುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ. ಲಾಕ್ಡೌನ್ನಿಂದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುನೀಲ್ ಅರೋರಾ ಅಮೆರಿಕದಿಂದ ಭಾರತಕ್ಕೆ ವಾಪಸಾಗಿಲ್ಲ. ಏತನ್ಮಧ್ಯೆ, ಮಹಾಮೈತ್ರಿ ಮುಖಂಡರು ಕೇಂದ್ರ ಚುನಾವಣಾ ಆಯೋಗಕ್ಕೂ ಪತ್ರ ಬರೆದು ಚುನಾವಣೆಗೆ ಒತ್ತಾಯಿಸಲಿದ್ದಾರೆ ಎಂಬ ಮಾತುಗಳಿವೆ. ಹೀಗಾದಲ್ಲಿ, ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಆಯೋಗದ ಇತರ ಅಧಿಕಾರಿಗಳು ಆಯೋಗದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ತೀರ್ವನಿಸಬಹುದು. ಇಲ್ಲದಿದ್ದಲ್ಲಿ, ಮಹಾಮೈತ್ರಿ ಮುಖಂಡರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ. ಹಾಗೆ ನೋಡಿದರೆ, ಮಹಾರಾಷ್ಟ್ರದಲ್ಲಿ ಸರ್ಕಾರ ಪತನಗೊಳ್ಳುವ ಸ್ಥಿತಿಯಲ್ಲೇನೂ ಇಲ್ಲ ಮತ್ತು ರಾಜಕೀಯ ಅಸ್ಥಿರತೆಯೂ ನಿರ್ವಣವಾಗಿಲ್ಲ. ಹೀಗಿರುವಾಗ, ಉದ್ಧವ್ ಠಾಕ್ರೆ ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕೆಂಬ ಏಕೈಕ ಕಾರಣಕ್ಕೆ ಏಕೆ ಚುನಾವಣೆ ನಡೆಸಬೇಕು ಎಂದೂ ವಿಪಕ್ಷಗಳು ಪ್ರಶ್ನಿಸಬಹುದು. ಹಾಗೆಯೇ, ಉದ್ಧವ್ಗೆ ಅನುಕೂಲ ಆಗುವುದಕ್ಕೋಸ್ಕರ ಅವರನ್ನೇಕೆ ನಾಮನಿರ್ದೇಶನದ ಹಾದಿ ಮೂಲಕ ಪರಿಷತ್ಗೆ ಆಯ್ಕೆ ಮಾಡಬೇಕು ಎಂದು ರಾಜ್ಯಪಾಲರು ಪ್ರಶ್ನಿಸಬಹುದು.
ಮಹಾರಾಷ್ಟ್ರದಲ್ಲಿ ಶಿವಸೇನೆ ಕೈಕೊಟ್ಟ ಪರಿಣಾಮ ಅಜಿತ್ ಪವಾರ್ ಜತೆ ಸೇರಿ ಸರ್ಕಾರ ರಚಿಸಿ, ನಂತರ ಭಾರಿ ಮುಜುಗರಕ್ಕೀಡಾದ ಪ್ರಸಂಗವನ್ನು ಪ್ರಧಾನಿ ನರೇಂದ್ರ ಮೋದಿ-ಅಮಿತ್ ಷಾ ಆದಿಯಾಗಿ ಇಡೀ ರಾಜ್ಯ ಬಿಜೆಪಿ ಮರೆತಿಲ್ಲ. ಹೀಗಿರುವಾಗ, ಉದ್ಧವ್ ಠಾಕ್ರೆ ಹಾದಿಯನ್ನು ಕೇಂದ್ರ ಬಿಜೆಪಿ ನಾಯಕರು ಅಷ್ಟೊಂದು ಸುಗಮಗೊಳಿಸುತ್ತಾರೆಯೇ? ಹಾಗಂತ ಕರೊನಾ ಬಿಕ್ಕಟ್ಟಿನ ಈ ದಿನಗಳಲ್ಲಿ ಮತ್ತು ಅತ್ಯಧಿಕ ಸೋಂಕಿತರಿರುವ ಮಹಾರಾಷ್ಟ್ರದಲ್ಲಿ ರಾಜಕೀಯ ದಾಳ ಬೀಸಲು ಇದು ಸಕಾಲವೇ? ಈ ನಿಟ್ಟಿನಲ್ಲಿ ಪ್ರಧಾನಿ ತಳೆಯಲಿರುವ ನಿರ್ಣಯ ಮಹತ್ವ ಪಡೆಯಲಿದ್ದು, ರಾಜ್ಯಪಾಲರ ಕಚೇರಿಗೆ ಪ್ರಧಾನಿ ಕಚೇರಿಯಿಂದ ಸೂಕ್ತ ಸಂದೇಶ ಬರಲಿ ಎಂದೇ ಮಹಾಮೈತ್ರಿ ನಾಯಕರು ನಿರೀಕ್ಷಿಸುತ್ತಿದ್ದಾರೆ.
ಮರುನೇಮಕಕ್ಕೆ ಕಾನೂನಿನ ಲಗಾಮು
ಸಿಎಂ ಸ್ಥಾನದಲ್ಲಿ ಮುಂದುವರಿಯಲು ಉದ್ಧವ್ ಠಾಕ್ರೆ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮರು ನೇಮಕ ಗೊಳಿಸುವುದಕ್ಕೆ ಕಾನೂನಿನ ಕಂಟಕವಿದೆ. 2001ರಲ್ಲಿ ಸುಪ್ರೀಂಕೋರ್ಟ್ ಇಂಥದ್ದೊಂದು ನಡೆಯನ್ನು ಸಂವಿಧಾನದ ಅಣಕ ಮತ್ತು ಪ್ರಜಾಪ್ರಭುತ್ವ ವಿರೋಧಿ ಎಂದು ವ್ಯಾಖ್ಯಾನಿಸಿರುವುದು ಉಲ್ಲೇಖಾರ್ಹ. 1995ರಲ್ಲಿ ಪಂಜಾಬಿನ ಕಾಂಗ್ರೆಸ್ ಮುಖಂಡ ತೇಜ್ ಪ್ರಕಾಶ್ ಸಿಂಗ್ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿ ನೇಮಕಗೊಂಡಿದ್ದರು. ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ 6 ತಿಂಗಳೊಳಗೆ ಶಾಸಕರಾಗಿ ಆಯ್ಕೆ ಆಗಬೇಕಿದ್ದರೂ, ಅವರು ಶಾಸಕರಾಗಿರಲಿಲ್ಲ. ಹೀಗಾಗಿ, 1996ರಲ್ಲಿ ಮತ್ತೊಮ್ಮೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ, ಅಧಿಕಾರದಲ್ಲಿ ಮುಂದುವರಿದರು. ಈ ಪ್ರಕರಣವನ್ನು
ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಯಿತು. 2001ರಲ್ಲಿ ತೇಜ್ ಪ್ರಕಾಶ್ ವಿರುದ್ಧ ತೀರ್ಪು ಬಂದರೂ ಅವರ ಮೇಲೆ ಪರಿಣಾಮ ಬೀರಲಿಲ್ಲ. ಏಕೆಂದರೆ, ಅದಾಗಲೇ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ಆದರೆ, ಉದ್ಧವ್ ಇದೇ ಹಾದಿ ತುಳಿದರೆ ಕಾನೂನಾತ್ಮಕ ಇಕ್ಕಟ್ಟಿನಲ್ಲಿ ಸಿಲುಕಿಕೊಳ್ಳಬಹುದು. ಹಾಗಿದ್ದರೂ, ಉದ್ಧವ್ ಉದ್ದೇಶಪೂರ್ವಕವಾಗಿ ಚುನಾವಣೆಯಿಂದ ತಪ್ಪಿಸಿಕೊಳ್ಳುತ್ತಿಲ್ಲ ಎಂಬುದನ್ನು ಗಮನಿಸಬೇಕು.
ಕರೊನಾದಿಂದಾಗಿ ಈ ಅನಿರೀಕ್ಷಿತ ಬಿಕ್ಕಟ್ಟು ನಿರ್ವಣವಾಗಿ, ಚುನಾವಣೆ ಮುಂದಕ್ಕೆ ಹೋಗಿದೆ. ಹೀಗಾಗಿ, ಲಾಕ್ಡೌನ್ ಅಂತ್ಯಗೊಳ್ಳುವ ತನಕ ನೀವೇ ಸಿಎಂ ಆಗಿ ಮುಂದುವರಿದು, ನಂತರ ಚುನಾವಣೆ ಎದುರಿಸಿ ಎಂದೂ ಕೋರ್ಟ್ ಸಲಹೆ ನೀಡಬಹುದು.
ಗವರ್ನರ್ಗಿದೆ ಅವಕಾಶ, ಆದರೆ...
ಪರಿಷತ್ಗೆ ಚುನಾವಣೆ ಮೂಲಕವೇ ಉದ್ಧವ್ ಆಯ್ಕೆ ಆಗಬೇಕೆಂದಿಲ್ಲ. ಖಾಲಿ ಇರುವ ಸ್ಥಾನಕ್ಕೆ ನಾಮ ನಿರ್ದೇಶನ ಮಾಡುವ ವಿವೇಚನಾಧಿಕಾರ ರಾಜ್ಯಪಾಲರಿಗಿದೆ. ಸಾಹಿತ್ಯ, ಕಲೆ, ವಿಜ್ಞಾನ, ಸಹಕಾರ ಚಳವಳಿ ಅಥವಾ ಸಾಮಾಜಿಕ ಸೇವೆಗಳ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸಂವಿಧಾನದ ಆರ್ಟಿಕಲ್ 171(5)ರ ಅಡಿ ರಾಜ್ಯಪಾಲರು ನಾಮ ನಿರ್ದೇಶನ ಮಾಡಬಹುದು. ರಾಜಕಾರಣವೂ ಸಾಮಾಜಿಕ ಸೇವೆ ವ್ಯಾಪ್ತಿಯಲ್ಲೇ ಬರುತ್ತದೆ ಎಂದು ಕೆಲ ನ್ಯಾಯಾಲಯಗಳೂ ತೀರ್ಪು ನೀಡಿವೆ. ಹೀಗಾಗಿ, ಉದ್ಧವ್ ನಾಮನಿರ್ದೇಶನಕ್ಕೆ ಅರ್ಹರಾಗಿದ್ದಾರೆ ಎಂದು ಮಹಾಮೈತ್ರಿ ಮುಖಂಡರು ಕೋರಿದ್ದಾರೆ. 78 ಸದಸ್ಯರುಳ್ಳ ಮಹಾರಾಷ್ಟ್ರ ಪರಿಷತ್ಗೆ 12 ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸಬಹುದು. ಜೂನ್ 6ಕ್ಕೆ ಈ ಎಲ್ಲ 12 ಸ್ಥಾನಗಳ ಅವಧಿ ಪೂರ್ಣಗೊಳ್ಳಲಿದೆ. ಪರಿಷತ್ನಲ್ಲಿದ್ದ ಇಬ್ಬರು ಎನ್ಸಿಪಿ ಸದಸ್ಯರಾದ ರಾಹುಲ್ ನಾರ್ವೆಕರ್ ಮತ್ತು ರಾಮ್ ರಾವ್ ವಾದ್ಕೂಟ್ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಸೇರಿದ್ದರಿಂದ ಈ 2 ಖಾಲಿ ಸ್ಥಾನಗಳನ್ನು ಭರ್ತಿ ಮಾಡಬಹುದು. ಆದರೆ, ಖಾಲಿ ಇರುವ ಸ್ಥಾನಗಳ ಅವಧಿ 6 ತಿಂಗಳಿಗಿಂತ ಕಡಿಮೆಯಿದ್ದಾಗ ರಾಜ್ಯಪಾಲರಿಗೆ ವಿವೇಚನಾಧಿಕಾರದ ಮೂಲಕ ನಾಮನಿರ್ದೇಶನ ಮಾಡುವ ಅಧಿಕಾರ ಇರುವುದಿಲ್ಲ. ಆ ಅವಧಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚಿರಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ. ಬಹುಶಃ ಇದೇ ಕಾರಣಕ್ಕೆ ರಾಜ್ಯಪಾಲರು ಮಹಾಮೈತ್ರಿ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗುತ್ತಿದೆ. ಕಾನೂನು ತಜ್ಞ ಮತ್ತು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ‘ರಾಜ್ಯ ಕ್ಯಾಬಿನೆಟ್ ಶಿಫಾರಸಿಗೆ ರಾಜ್ಯಪಾಲರು ಸಮ್ಮತಿಸಲೇಬೇಕು’ ಎಂದು ಹೇಳುತ್ತಿದ್ದಾರೆ. ಈ ಗೊಂದಲಗಳಿಂದಾಗಿಯೇ, ಸಿಎಂ ಉದ್ಧವ್ ಠಾಕ್ರೆ ಅನಿವಾರ್ಯವಾಗಿ ಪ್ರಧಾನಿ ನರೇಂದ್ರ ಮೋದಿಗೆ ದೂರವಾಣಿ ಮೂಲಕ ಮಾತನಾಡಿ, ಬಿಕ್ಕಟ್ಟನ್ನು ನಿವಾರಣೆ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.
ಮಹಾಮೈತ್ರಿ ಮುಂದಿರುವ ಆಯ್ಕೆಗಳು
ಮುಂದೂಡಲಾಗಿರುವ ವಿಧಾನಪರಿಷತ್ ಚುನಾವಣೆ ಈಗಲೇ ನಡೆಸಬೇಕು ಎಂದು ಒತ್ತಾಯಿಸುವುದು. ಉದ್ಧವ್ ಠಾಕ್ರೆ ಅವಿರೋಧವಾಗಿ ಆಯ್ಕೆ ಆಗುವುದರಿಂದ ಚುನಾವಣೆ ಘೊಷಣೆ ನಂತರ ನೀಡಲಾಗುವ 21 ದಿನಗಳ ಅವಧಿ ಕಡಿತಗೊಳಿಸಬೇಕು.
ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿ, ಪರಿಷತ್ ಚುನಾವಣೆ ನಡೆಸುವಂತೆ ಆಯೋಗಕ್ಕೆ ಸೂಚನೆ ನೀಡಬೇಕೆಂದು ಕೇಳಿಕೊಳ್ಳುವುದು.
ಇದ್ಯಾವುದೂ ಆಗದಿದ್ದಲ್ಲಿ, ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು. ನಂತರ, ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಶಾಸಕಾಂಗ ಪಕ್ಷಗಳ ಸಭೆ ಕರೆದು ತಮ್ಮ ನಾಯಕರನ್ನಾಗಿ ಮರು ನೇಮಕ ಮಾಡಿದ್ದೇವೆ ಎಂದು ಘೊಷಿಸುವುದು. ಆಗ, ಪರಿಷತ್ ಅಥವಾ ವಿಧಾನಸಭೆಗೆ ಆಯ್ಕೆಯಾಗಲು ಮತ್ತೆ 6 ತಿಂಗಳ ಕಾಲಾವಧಿ ಸಿಕ್ಕಂತಾಗುತ್ತದೆ.