

ಬೆಂಗಳೂರು: ರಾಜಧಾನಿಯಲ್ಲಿ ಬೃಹತ್ ಯೋಜನೆಗಳ ಅನುಷ್ಠಾನಕ್ಕಾಗಿ ಹೊಸ (ವಿಶೇಷ ಯೋಜನಾ ವಾಹಕ) ಎಸ್‌ಪಿವಿ ಸ್ಥಾಪಿಸುವ ಬಿಬಿಎಂಪಿ ಪ್ರಸ್ತಾಪಕ್ಕೆ ನಗರಾಭಿವೃಧ್ಧಿ ಇಲಾಖೆ ಅನುಮೋದನೆ ನೀಡಿದೆ. ಈ ಮೂಲಕ ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಅಡಿಯಲ್ಲೇ ಬೃಹತ್ ಯೋಜನೆಗಳು ಜಾರಿಗೆ ಬರಲಿದ್ದು, ಆಡಳಿತ, ಹಣಕಾಸು ಇತ್ಯಾದಿ ವಿಷಯಗಳಲ್ಲಿ ತ್ವರಿತ ನಿರ್ಧಾರ ಸರ್ಕಾರದ ಮಟ್ಟದಲ್ಲೇ ಆಗಲಿದೆ.
ಬೆಂಗಳೂರಿನ ಸಂಚಾರ ವ್ಯವಸ್ಥೆ ಸುಧಾರಣೆ ಸಂಬಂಧ ಮುಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರತ್ಯೇಕ ಸಂಸ್ಥೆಯ ಅಗತ್ಯತೆಯನ್ನು ರಾಜ್ಯ ಸರ್ಕಾರ ಇಂಗಿತ ವ್ಯಕ್ತಪಡಿಸಿತ್ತು. ಇದಕ್ಕಾಗಿ 2025-26ನೇ ಸಾಲಿನ ಬಜೆಟ್‌ನಲ್ಲಿ ಎಸ್‌ಪಿವಿ ಸ್ಥಾಪಿಸುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಬಿಬಿಎಂಪಿ ಮುಖ್ಯ ಆಯುಕ್ತರು ಕಳೆದ ಮಾರ್ಚ್ 24ರಂದು ಬಿ-ಸ್ಮೈಲ್ ಸ್ಥಾಪಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೀಗ ನಗರಾಭಿವೃಧ್ಧಿ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಹೊಸ ಎಸ್‌ಪಿವಿ ರಚನೆಗೆ ಹಸಿರುನಿಶಾನೆ ದೊರೆತಿದೆ.
ಸಿಇಒ ಹುದ್ದೆಗೆ ಅರ್ಹರ ಹುಡುಕಾಟ?:
ಎಸ್‌ಪಿವಿ ಯನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಈ ಹುದ್ದೆಗಾಗಿ ಸೂಕ್ತ ಐಎಎಸ್ ಅಧಿಕಾರಿಯ ಹುಡುಕಾಟಕ್ಕೆ ಚಾಲನೆ ದೊರೆತಿದೆ. ಉಳಿದಂತೆ ನಗರಾಭಿವೃದ್ಧಿ ಇಲಾಖೆಯ ಎಸಿಎಸ್, ಬಿಬಿಎಂಪಿ ಮುಖ್ಯ ಆಯುಕ್ತ, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷ, ಬಿಬಿಎಂಪಿ ಮೇಯರ್, ಪಾಲಿಕೆ ಪ್ರಧಾನ ಅಭಿಯಂತರ ಹಾಗೂ ಮೂವರು ತಜ್ಞರು ಇರಲಿದ್ದಾರೆ. ಎಸ್‌ಪಿವಿಯ ಕಚೇರಿಯು ಸದ್ಯ ವಸಂತನಗರದಲ್ಲಿ ಕಾರ್ಯಾಚರಿಸುತ್ತಿರುವ ಸ್ಮಾರ್ಟ್ ಸಿಟಿ ಆಫೀಸ್‌ನಲ್ಲಿ ಕಾರ್ಯಾರಂಭ ಮಾಡಲಿದೆ.
ಭವಿಷ್ಯದಲ್ಲಿ ರಾಜಧಾನಿಗೆ ಘೋಷಣೆಯಾಗಲಿರುವ ಬೃಹತ್ ಯೋಜನೆಗಳು ಕೂಡ ಹೊಸ ಎಸ್‌ಪಿವಿ ತೆಕ್ಕೆಗೆ ತೆಗೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಬಿಬಿಎಂಪಿ ಹೊರಗಿನ ಪ್ರದೆಶಗಳಲ್ಲೂ ಕಾಮಗಾರಿ ವಹಿಸಲು ಅವಕಾಶವಾಗುವಂತೆ ಸಂಸ್ಥೆಯ ವ್ಯಾಪ್ತಿಯನ್ನು ಇಡೀ ನಗರ ಜಿಲ್ಲೆಗೆ ಅನ್ವಯಿಸಲಾಗಿದೆ. ಭೂಸ್ವಾಧೀನ ಸಮಸ್ಯೆ, ಖಾಸಗಿ ಸಂಸ್ಥೆಗಳಿಂದ ಸಾಲ ಎತ್ತುವಳಿ, ಡಿಪಿಆರ್ ಹಾಗೂ ಕಾಮಗಾರಿ ಸಂಬಂಧಿತ ಕೆಲಸ-ಕಾರ್ಯಕ್ಕಾಗಿ ಈ ಸಂಸ್ಥೆಯೇ ಸ್ವಯಂ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಎಸ್‌ಪಿವಿ ವ್ಯಾಪ್ತಿಗೆ ಸಪ್ತ ಯೋಜನೆ:
1. ಸುರಂಗ ರಸ್ತೆ
2. ಎಲಿವೇಟೆಡ್ ಕಾರಿಡಾರ್/ಗ್ರೇಡ್ ಸೆಪರೇಟರ್
3. ಡಬಲ್ ಡೆಕ್ಕರ್ (ಮೆಟ್ರೋ, ರಸ್ತೆ ಮೇಲ್ಸೇತುವೆ)
4. ರಾಜಕಾಲುವೆ ಬದಿ ಲಿಂಕ್ ರಸ್ತೆ ನಿರ್ಮಾಣ
5. ರಸ್ತೆಗಳ ವೈಟ್ ಟಾಪಿಂಗ್
6. ರಸ್ತೆ ವಿಸ್ತರಣೆ ಯೋಜನೆಗಳು
7. ಸ್ಕೈ ಡೆಕ್ (ಆಕಾಶ ಗೋಪುರ)