

ಚೆನ್ನೈ: ಸನಾತನ ಧರ್ಮದ ಕುರಿತು ನಾನು ನೀಡಿದ ಹೇಳಿಕೆಗೆ ಬದ್ದವಾಗಿದ್ದೇನೆ. ಕಾನೂನು ಸೇರಿದಂತೆ ಯಾವುದೇ ಹೋರಾಟಕ್ಕೂ ಸಿದ್ದ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಹೇಳಿದ್ದಾರೆ.
ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆ ಇದ್ದಂತೆ ಎಂದು ಹೇಳುವ ಮೂಲಕ ಸಚಿವ ಉದಯ್ನಿಧಿ ಸ್ಟಾಲಿನ್ ವಿವಾದವನ್ನು ಹುಟ್ಟುಹಾಕಿದ್ದರು. ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಇವರ ಹೇಳಿಕೆಯನ್ನು ಖಂಡಿಸಿದ್ದವು.
ಇನ್ನು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಉದಯನಿಧಿ ಸ್ಟಾಲಿನ್ ನಾನು ಯಾವುದೇ ಬೆದರಿಕೆಗಳಿಗೆ ಹೆದರುವುದಿಲ್ಲ. ಎಂತಹ ಸವಾಲು ಎದುರು ಬಂದರೂ ಸಹ ನಾನು ಎದುರಿಸಲು ಸಿದ್ದನಿದ್ದೇನೆ. ಪೆರಿಯಾರ್, ಅಣ್ಣಾ ಮತ್ತು ಕಲೈನಾರ್ ಅನುಯಾಯಿಗಳಾದ ನಾವು ನಮ್ಮ ತಂದೆ ಎಂ.ಕೆ. ಸ್ಟಾಲಿನ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಎತ್ತಿ ಹಿಡಿಯಲು ಹೋರಾಡುತ್ತೇವೆ.
ಸನಾತನ ಧರ್ಮ ನಿರ್ಮೂಲನೆ ಮಾಡುವ ನಮ್ಮ ಸಂಕಲ್ಪ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ತಾವು ನೀಡಿರುವ ಹೇಳಿಕೆಯನ್ನು ಸಚಿವ ಉದಯ್ನಿಧಿ ಸ್ಟಾಲಿನ್ ತಾವು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶನಿವಾರ ಪ್ರಗತಿಪರ ಲೇಖಕರು ಹಾಗೂ ಕಲಾವಿದರು ಆಯೋಜನೆ ಮಾಡಿದ್ದ ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಚಿವ ಉದಯನಿಧಿ ಸ್ಟಾಲಿನ್ ಕೆಲವು ವಿಚಾರಗಳನ್ನು ನಾವು ವಿರೋಧಿಸುವುದರ ಬದಲು ಅದನ್ನು ನಿರ್ಮೂಲನೆ ಮಾಡುವುದು ಒಳ್ಳೆಯದು. ಮಲೇರಿಯಾ, ಡೆಂಘೆ, ಕೋವಿಡ್ನಂತಹ ಸೋಂಕನ್ನು ವಿರೋದಿಸಬಾರದು ಬದಲಿಗೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ವಿರೋಧಿಸುವ ಬದಲು ನಿರ್ಮೂಲನೆ ಮಾಡಬೇಕು ಎಂದು ಸಮಾವೇಶದಲ್ಲಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಮತ್ತು ಹೊಸ ವಿವಾದವನ್ನು ಹುಟ್ಟು ಹಾಕಿತ್ತು.