ಯುಸಿಸಿ, ಒಂದು ದೇಶ ಒಂದು ಚುನಾವಣೆ ಮುಂದಿನ ಅವಧಿಯಲ್ಲಿ ಜಾರಿ: ಅಮಿತ್ ಷಾ ಭರವಸೆ

amith sha
Published on

ನವದೆಹಲಿ: ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಸಂಬಂಧಪಟ್ಟವರೆಲ್ಲರ ಜೊತೆ ಸಮಾಲೋಚನೆ ನಡೆಸಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರವು ತನ್ನ ಮುಂದಿನ ಅವಧಿಯಲ್ಲಿ 'ಒಂದು ರಾಷ್ಟ್ರ, ಒಂದು ಚುನಾವಣೆ ಸಹ ಜಾರಿಗೆ ತರಲಿದೆ, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಸಮಯ ಬಂದಿದೆ. ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಸುವುದರಿಂದ ವೆಚ್ಚವೂ ತಗ್ಗಲಿದೆ ಎಂದು ಅಮಿತ್ ಷಾ ಹೇಳಿದರು.

ಸದ್ಯ ಬಿರುಬಿಸಲಿನ ಸಮಯದಲ್ಲಿ ಚುನಾವಣೆ ನಡೆಯುತ್ತಿದ್ದು ಚಳಿಗಾಲ ಅಥವಾ ಬೇರೆ ಸಮಯದಲ್ಲಿ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಅಮಿತ್ ಷಾ ಉತ್ತರಿಸಿದರು. ನಾವು ಅದರ ಬಗ್ಗೆ ಯೋಚಿಸಬೇಕಿದೆ ಎಂದರು.

ಯುಸಿಸಿ ಜಾರಿಯ ಹೊಣೆ ನಮ್ಮ ಮೇಲಿದೆ. ಸ್ವಾತಂತ್ರ್ಯ ಬಂದು ಸಂವಿಧಾನ ರಚನೆಯಾದಾಗಿನಿಂದಲೂ ಬಾಕಿ ಇದೆ ಎಂದು ಹೇಳಿದರು.
ಸಂವಿಧಾನದಲ್ಲಿ ಯುಸಿಸಿ ಸೇರ್ಪಡೆಗೆ ಸಂವಿಧಾನ ರಚನಾ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಜಾತ್ಯತೀತ ದೇಶದಲ್ಲಿ ಧರ್ಮಗಳ ಆಧಾರದ ಮೇಲೆ ಕಾನೂನು ಇರಬಾರದು. ಏಕರೂಪ ನಾಗರಿಕ ಸಂಹಿತೆ ಬೇಕು ಎಂದು ಕಾನೂನು ತಜ್ಞರಾದ ಕೆಎಂ ಮುನ್ಷಿ, ರಾಜೇಂದ್ರ ಬಾಬು, ಅಂಬೇಡ್ಕರ್ ಅವರು ಹೇಳಿದ್ದರು.

ಬಿಜೆಪಿ ಬಹುಮತದ ಸರ್ಕಾರ ಹೊಂದಿರುವ ಉತ್ತರಾಖಂಡದಲ್ಲಿ ಈ ಕುರಿತು ಪ್ರಯೋಗ ಮಾಡಲಾಗಿದೆ. ಏಕರೂಪ ನಾಗರಿಕ ಸಂಹಿತೆಯು ಒಂದು ದೊಡ್ಡ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ಸುಧಾರಣೆಯಾಗಿದೆ ಎಂದು ನಾನು ನಂಬುತ್ತೇನೆ. ಕಾನೂನು ಜಾರಿ ಮಾಡಿದ ಉತ್ತರಾಖಂಡ ಸರ್ಕಾರ ಸಾಮಾಜಿಕ ಮತ್ತು ಕಾನೂನಾತ್ಮಕ ಪರಿಶೀಲನೆ ನಡೆಸಬೇಕಿದೆ. ಧಾರ್ಮಿಕ ನಾಯಕರ ಜೊತೆ ಸಮಾಲೋಚನೆ ನಡೆಸಬೇಕಿದೆ. ಯಾರಾದರೂ ಖಂಡಿತವಾಗಿಯೂ ನ್ಯಾಯಾಲಯಕ್ಕೆ ಹೋಗುತ್ತಾರೆ. ನ್ಯಾಯಾಂಗ ಅಭಿಪ್ರಾಯ ಬೇಕಿದೆ ಎಂದು ಹೇಳಿದರು.

ದೇಶದ ರಾಜ್ಯಗಳ ಶಾಸಕಾಂಗ ಮತ್ತು ಸಂಸತ್ತು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಮತ್ತು ಕಾನೂನು ಜಾರಿಗೆ ತರಬೇಕು. ಅದಕ್ಕಾಗಿಯೇ ನಾವು ನಮ್ಮ ‘ಸಂಕಲ್ಪ ಪತ್ರ’ದಲ್ಲಿ ಬರೆದಿದ್ದೇವೆ, ಇಡೀ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆ ಹೊಂದಲು ಬಿಜೆಪಿ ಗುರಿಯಾಗಿದೆ.ಅವರು ಪ್ರತಿಪಾದಿಸಿದರು.
ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸಾಧಿಸಲು ನಾವು ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇವೆ. ಈ ಬಗ್ಗೆಯೂ ಚರ್ಚೆಯಾಗಬೇಕು. ರಾಮ್ ನಾಥ್ ಕೋವಿಂದ್ ಸಮಿತಿಯನ್ನು ರಚಿಸಿದ್ದರು. ನಾನು ಕೂಡ ಅದರಲ್ಲಿ ಸದಸ್ಯನಾಗಿದ್ದೆ. ಅದರ ವರದಿಯನ್ನು ಸಲ್ಲಿಸಲಾಗಿದೆ. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆಯಬೇಕಾದ ಸಮಯ ಬಂದಿದೆ" ಎಂದು ಅವರು ಹೇಳಿದರು.

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ ಅಧಿವೇಶನದಲ್ಲಿ ಈ ಕುರಿತು ಮಸೂದೆಯನ್ನು ಮಂಡಿಸಬಹುದೇ ಎಂಬ ಪ್ರಶ್ನೆಗೆ, "ನಮ್ಮ ನಿರ್ಣಯವು ಐದು ವರ್ಷಗಳು, ನಾವು ಅದನ್ನು ಈ ಅವಧಿಯಲ್ಲಿ ತರುತ್ತೇವೆ" ಎಂದು ಷಾ ಹೇಳಿದರು. ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ, ಸಂವಿಧಾನದ 44 ನೇ ವಿಧಿಯು ಏಕರೂಪ ನಾಗರಿಕ ಸಂಹಿತೆಯನ್ನು ರಾಜ್ಯ ನೀತಿಯ ನಿರ್ದೇಶನ ತತ್ವಗಳಲ್ಲಿ ಒಂದಾಗಿದೆ ಎಂದು ಬಿಜೆಪಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net