ಯುಸಿಸಿ ಅಂತಿಮ ನಿಯಮ ಸಿದ್ಧ; ಪರಿಶೀಲನೆ ಬಳಿಕ ಜಾರಿ

UCC
Published on

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಕುರಿತ ನಿಯಮ ಮತ್ತು ನಿಬಂಧನೆಗಳ ಅಂತಿಮ ಕರಡನ್ನು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಶುಕ್ರವಾರ ಹಸ್ತಾಂತರಿಸಲಾಗಿದೆ. ಈ ಮೂಲಕ ಉತ್ತರಾಖಂಡದಲ್ಲಿ ಯುಸಿಸಿ ಅನುಷ್ಠಾನಕ್ಕೆ ವೇದಿಕೆ ಸಿದ್ಧವಾಗಿದೆ.

ಮಾಜಿ ಮುಖ್ಯ ಕಾರ್ಯದರ್ಶಿ ಶತ್ರುಘ್ನ ಸಿಂಗ್ ನೇತೃತ್ವದ ಒಂಬತ್ತು ಸದಸ್ಯರ ಸಮಿತಿಯು ಈ ನಿಯಮಗಳನ್ನು ರೂಪಿಸಿದೆ. ರಾಜ್ಯ ಸರ್ಕಾರ ಈಗ ಕರಡನ್ನು ಅಧ್ಯಯನ ಮಾಡಿ, ಸಂಪುಟದ ಮುಂದೆ ತರಲಿದೆ. ಕ್ಯಾಬಿನೆಟ್ ಅನುಮತಿ ನೀಡಿದ ನಂತರ ಯುಸಿಸಿ ಜಾರಿಗೆ ತರಲಾಗುತ್ತದೆ. ಇದು ಅನುಷ್ಠಾನಗೊಂಡಲ್ಲಿ ಸ್ವತಂತ್ರ ಭಾರತದಲ್ಲಿ ಈ ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಉತ್ತರಾಖಂಡ ಆಗಲಿದೆ.

ನಾಲ್ಕು ಭಾಗಗಳು: ನಿಯಮಗಳ ಕರಡನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಮದುವೆ ಮತ್ತು ವಿಚ್ಛೇದನ, ಉತ್ತರಾಧಿಕಾರ, ಲಿವ್-ಇನ್ ಸಂಬಂಧಗಳು, ಜನನ ಮತ್ತು ಮರಣದ ನೋಂದಣಿಗಾಗಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಇದರಲ್ಲಿ ಸ್ಪಷ್ಟಪಡಿಸಲಾಗಿದೆ. ಯಾವುದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಯುಸಿಸಿಯನ್ನು ಜಾರಿಗೆ ತರಲಾಗುತ್ತಿಲ್ಲ. ಎಲ್ಲರಿಗೂ ಸಮಾನತೆ ಮತ್ತು ಮಹಿಳೆಯರ ಸುರಕ್ಷತೆ, ಸಬಲೀಕರಣಕ್ಕಾಗಿ ಈ ಹೆಜ್ಜೆ ಇಡಲಾಗಿದೆ. ಕಾನೂನು ಮತ್ತು ಇತರ ಅಂಶಗಳನ್ನು ಪರಿಶೀಲಿಸುತ್ತೇವೆ. ವಿವರವಾಗಿ ರ್ಚಚಿಸಿದ ಬಳಿಕವೇ ಕಾಯ್ದೆ ಜಾರಿಗೆ ತರುತ್ತೇವೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ವಿವಾಹಗಳು, ವಿಚ್ಛೇದನ ಮತ್ತು ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ ಮಾಡಬೇಕು. ಆನ್​ಲೈನ್ ಮೂಲಕವೂ ನೋಂದಣಿಗೆ ಅವಕಾಶವಿದೆ.

ಬಾಲ್ಯವಿವಾಹ ತಡೆಗೆ ವೈಯಕ್ತಿಕ ಕಾನೂನು ಅಡ್ಡಿಯಲ್ಲ: ಯಾವುದೇ ವೈಯಕ್ತಿಕ ಕಾನೂನು, ಸಂಪ್ರದಾಯಗಳ ಕಾರಣಕ್ಕೆ ಬಾಲ್ಯವಿವಾಹ ನಿಷೇಧ ಕಾಯಿದೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ. ಬಾಲ್ಯವಿವಾಹ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಸಿಜೆಐ ಡಿ.ವೈ ಚಂದ್ರಚೂಡ್, ನ್ಯಾ. ಜೆ.ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಬಾಲ್ಯವಿವಾಹ ತಡೆ ಕಾನೂನಿನ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮಾರ್ಗಸೂಚಿಯನ್ನೂ ಹೊರಡಿಸಿದೆ. ವೈಯಕ್ತಿಕ ಕಾನೂನುಗಳ ಮೇಲೂ ಬಾಲ್ಯ ವಿವಾಹ ನಿಷೇಧ ಕಾಯ್ದೆ (ಪಿಸಿಎಂಎ) ಅನ್ವಯ ಆಗುತ್ತದೆಯೇ ಎಂಬ ವಿಷಯ ಸಂಸತ್ತಿನಲ್ಲಿ ಚರ್ಚೆ ಆಗಬೇಕಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಬಾಲ್ಯವಿವಾಹಗಳನ್ನು ನಿಷೇಧಿಸಲು ಕಠಿಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದರೆ ಅಲ್ಪಸಂಖ್ಯಾತರಲ್ಲಿ ನಿಶ್ಚಿತವಾಗುವ ವಿವಾಹಗಳಿಗೂ ಇದು ಅನ್ವಯ ಆಗುತ್ತದೆಯೇ ಎಂಬುದು ಕಾಯ್ದೆಯಲ್ಲಿ ಸ್ಪಷ್ಟ ಉಲ್ಲೇಖ ಇಲ್ಲ. ಇದು ದೊಡ್ಡ ಸಾಮಾಜಿಕ ಸಮಸ್ಯೆ ಆಗಿದ್ದು, ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತದೆ. ಮಕ್ಕಳು ಪ್ರಬುದ್ಧರಾಗುವ ಮೊದಲೇ ಆಯ್ಕೆಯ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತದೆ. ಬಾಲ್ಯವಿವಾಹಗಳ ತಡೆಗೆ ಸ್ಪಷ್ಟ ವಿಧಾನಗಳ ಅಗತ್ಯವಿದೆ. ಬಾಲ್ಯವಿವಾಹದ ಮೂಲ ಕಾರಣಗಳಾದ ಬಡತನ, ಲಿಂಗ, ಅಸಮಾನತೆ, ಶಿಕ್ಷಣದ ಕೊರತೆಯನ್ನು ಪರಿಹರಿಸುವತ್ತ ಗಮನಹರಿಸುವುದರ ಜೊತೆಗೆ ವಿವಿಧ ಸಮುದಾಯಗಳ ವಿಶಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬಾಲ್ಯವಿವಾಹ ತಡೆಗಟ್ಟುವ ತಂತ್ರಗಳನ್ನು ರೂಪಿಸಬೇಕು. ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರ್ಟ್ ಹೇಳಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಕೋರ್ಟ್ ತೀರ್ಪು ನೀಡಿದೆ.

ಬೇನಾಮಿ ಆಸ್ತಿ ಕಾನೂನಿನ ಎರಡು ನಿಯಮ ವಾಪಸ್?: ಬೇನಾಮಿ ಆಸ್ತಿ ವಹಿವಾಟುಗಳನ್ನು ನಿಷೇಧ ಕಾನೂನಿನ ಎರಡು ನಿಬಂಧನೆಗಳನ್ನು ಅಸಾಂವಿಧಾನಿಕ ಎಂದು ಘೊಷಿಸಿದ 2022ರ ತೀರ್ಪನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹಿಂಪಡೆದಿದೆ. 2022ರ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನೂ ವಿಚಾರಣೆಗೆ ಅಂಗೀಕಾರ ಮಾಡಲಾಗಿದೆ. ಸಿಜೆಐ ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಈ ತೀರ್ಮಾನ ಕೈಗೊಂಡಿದೆ. ಈ ಹಿಂದೆ ಮಾಜಿ ಸಿಜೆಐ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಎರಡು ನಿಬಂಧನೆಗಳಿಗೆ ತಡೆ ನೀಡಿತ್ತು. ಬೇನಾಮಿ ಆಸ್ತಿ ವಹಿವಾಟುಗಳ ನಿಷೇಧ ಕಾಯಿದೆಯ ಸೆಕ್ಷನ್ 3(2) ಮತ್ತು 5 ಅನಿಯಂತ್ರಿತವಾಗಿದೆ. ಪ್ರಾಕ್ಸಿಗಳ ಮೂಲಕ ವ್ಯಕ್ತಿ ಹೊಂದಿರುವ ಆಸ್ತಿ, ವಹಿವಾಟುಗಳನ್ನು ಇದು ನಿಷೇಧಿಸುವ ಜತೆಗೆ ಸಂಬಂಧಪಟ್ಟ ವ್ಯಕ್ತಿಗಳ ಆಸ್ತಿಗಳನ್ನು ವಶಕ್ಕೆ ಪಡೆಯಲು ತನಿಖಾ ಸಂಸ್ಥೆಗಳಿಗೆ ಅನುಮತಿ ನೀಡುತ್ತದೆ. ಇದು ಅಸಾಂವಿಧಾನಿಕ ಎಂದು ಎನ್.ವಿ ರಮಣ ನೇತೃತ್ವದ ಪೀಠ ತೀರ್ಪು ನೀಡಿತ್ತು.

ಈಶ ಫೌಂಡೇಷನ್ ವಿರುದ್ಧ ವಿಚಾರಣೆ ಸ್ಥಗಿತಕ್ಕೆ ಆದೇಶ: ಕೊಯಮತ್ತೂರಿ ನಲ್ಲಿರುವ ಈಶ ಫೌಂಡೇಷನ್​ನಲ್ಲಿ ತನ್ನ ಇಬ್ಬರು ಪುತ್ರಿಯರನ್ನು ಬಂಧಿಸಿಡಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ. ಇಬ್ಬರೂ ಮಹಿಳೆಯರು ವಯಸ್ಕರಾಗಿದ್ದು, ಅವರು ಸ್ವಯಂಪ್ರೇರಣೆಯಿಂದ ಮತ್ತು ಯಾವುದೇ ಬಲವಂತವಿಲ್ಲದೆ ಆಶ್ರಮದಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಈ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಅಕ್ರಮವಾಗಿ ಬಂಧನಕ್ಕೊಳಗಾಗಿರುವ ಪುತ್ರಿಯರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅ. 3ರಂದು ನೀಡಿದ್ದ ಆದೇಶದ ಅನ್ವಯ ಪೊಲೀಸರು ಸುಪ್ರೀಂ ಕೋರ್ಟ್​ಗೆ ಸ್ಥಿತಿ ವರದಿ ಸಲ್ಲಿಸಿದ್ದರು. ಇದರ ಆಧಾರದಲ್ಲಿ ತೀರ್ಪು ಪ್ರಕಟಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net