Air India Crash ಮೃತ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ, ಸಹಾಯಾ: ಡಾಕ್ಟರ್‌ ಶಂಶೀರ್

Plane Crash
Published on

Air India Crash : ಜೂನ್ 12 ರಂದು, ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ವಿಮಾನ AI 171, ಟೇಕ್ ಆಫ್ ಆದ ಕೇವಲ 2 ನಿಮಿಷಗಳ ನಂತರ ಅಪಘಾತಕ್ಕೀಡಾಯಿತು.  ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಹಾನಿಗೊಳಗಾದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಕುಟುಂಬಗಳಿಗೆ ಯುಎಇ ಮೂಲದ ಭಾರತೀಯ ವೈದ್ಯ  ಡಾ. ಶಂಶೀರ್ ವಯಲಿಲ್ ಆರ್ಥಿಕ ನೆರವು ಘೋಷಿಸಿದ್ದಾರೆ.

 ಲಂಡನ್‌ಗೆ ಹೊರಟಿದ್ದ ಬೋಯಿಂಗ್ 787-8 (AI 171) ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಅದರಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಒಬ್ಬರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸಾವನ್ನಪ್ಪಿದ್ದರು.

ಮಧ್ಯಾಹ್ನ ಊಟದ ಸಮಯದಲ್ಲಿ ಬಿಜೆ ವೈದ್ಯಕೀಯ ಕಾಲೇಜಿನ ಅತುಲ್ಯಂ ಹಾಸ್ಟೆಲ್ ಸಂಕೀರ್ಣಕ್ಕೆ ವಿಮಾನ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗಳ ವಸತಿಗೃಹ ಮತ್ತು ಊಟದ ಹಾಲ್ ಸಂಪೂರ್ಣವಾಗಿ ನಾಶವಾಯಿತು.  ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರೂ ಇದ್ದರು. ಹಲವು ಮಂದಿ ಗಾಯಗೊಂಡಿದ್ದಾರೆ.

ಬುರ್ಜೀಲ್ ಹೋಲ್ಡಿಂಗ್ಸ್‌ನ ಸಂಸ್ಥಾಪಕ ಮತ್ತು ವಿಪಿಎಸ್ ಹೆಲ್ತ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಂಶೀರ್, ಅಪಘಾತದ ನಂತರದ ಪರಿಣಾಮಗಳನ್ನು ನೋಡಿ ತೀವ್ರ ದುಃಖಿತನಾಗಿದ್ದೇನೆ. ಗಂಭೀರವಾಗಿ ಗಾಯಗೊಂಡ ಐದು ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ವೈದ್ಯರ ಕುಟುಂಬಗಳಿಗೆ ತಲಾ 20 ಲಕ್ಷ ರೂ.ನೀಡಲಾಗುತ್ತದೆ. ಅಗತ್ಯವಿರುವವರಿಗೆ ತಕ್ಷಣದ ನೆರವು ಸಿಗುವಂತೆ ನೋಡಿಕೊಳ್ಳಲು ಬಿಜೆ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವೈದ್ಯರ ಸಂಘದ ಸಮನ್ವಯದ ಸಹಾಯದಿಂದ ಆರ್ಥಿಕ ಸಹಾಯವನ್ನು ವಿತರಿಸಲಾಗುವುದು ಎಂದು ಶಂಶೀರ್ ಅವರ ಹೇಳಿದ್ದಾರೆ.

ಶಂಶೀರ್ 2010ರಲ್ಲಿ ಮಂಗಳೂರು ವಿಮಾನ ಅಪಘಾತ ಸಂಭವಿಸಿದಾಗ ಕೂಡ ಸಾಕಷ್ಟು ಮಂದಿಗೆ ಆರ್ಥಿಕ ನೆರವು ಹಾಗೂ ಉದ್ಯೋಗಾವಕಾಶಗಳನ್ನು ಒದಗಿಸಿದ್ದರು. ಈಗ ಏರ್‌ ಇಂಡಿಯಾ ಅಪಘಾತದಲ್ಲಿ ಮೃತಪಟ್ಟ ವೈದ್ಯಕೀಯ ವಿದ್ಯಾರ್ಥಿಗಳ ಕುಟುಂಬಕ್ಕೆ 1 ಕೋಟಿ ರೂ. ಘೋಷಣೆ ಮಾಡುವ ಮೂಲಕ ಭಾರತ ಮೂಲದ ಯುಎಇಯಲ್ಲಿರುವ ವೈದ್ಯ ಶಂಶೀರ್ ಉದಾರತೆ ಮೆರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net