ಜಾಲಿರೇಡ್ ಹೋದಾಗ ಅಪಘಾತ ಇಬ್ಬರು ಸಾವು

accident-15
Published on

ಬೆಂಗಳೂರು: ಜಾಲಿರೇಡ್‌ಗೆ ತೆರಳಿ ವಾಪಸ್ ಮನೆ ಕಡೆ ಬರುವಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಇಂಜಿನಿಯರ್‌ಗಳು ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಪ್ರಕರಣ ನಡೆದಿದೆ.
ಮತ್ತಿಕೆರೆ ನಿವಾಸಿಗಳಾದ ಕಾರ್ತಿಕ್(೨೩) ಮತ್ತು ಆದರ್ಶ್(೨೩) ಮೃತ ಇಂಜಿನಿಯರ್‌ಗಳು.
ಘಟನೆಯಲ್ಲಿ ಇವರ ಮೂವರು ಸ್ನೇಹಿತರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ತಿಕ್ ಮತ್ತು ಆದರ್ಶ್ ಹಾಗೂ ಇತರೆ ಮೂವರು ಸ್ನೇಹಿತರು ಶನಿವಾರ ತಡರಾತ್ರಿ ಸ್ನೇಹಿತರೊಬ್ಬರ ಕಾರಿನಲ್ಲಿ ನಂದಿ ಬೆಟ್ಟಕ್ಕೆ ಹೋಗುತ್ತಿದ್ದರು. ಆದರೆ, ಮಾರ್ಗ ಮಧ್ಯೆ ನಸುಕಿನ ಮೂರು ಗಂಟೆ ಸುಮಾರಿಗೆ ವಾಪಸ್ ಬೆಂಗಳೂರಿನ ಕಡೆ ಬಂದಿದ್ದಾರೆ. ಈ ವೇಳೆ ಕಾರ್ತಿಕ್ ಕಾರು ಚಾಲನೆ ಮಾಡುತ್ತಿದ್ದು, ಪಕ್ಕದಲ್ಲೇ ಆದರ್ಶ್ ಕುಳಿತಿದ್ದ. ಹಿಂಭಾಗದಲ್ಲಿ ಮೂವರು ಸ್ನೇಹಿತರು ಕುಳಿತಿದ್ದರು. ಬಳ್ಳಾರಿ ರಸ್ತೆಯ ದೇವನಹಳ್ಳಿ ಸಮೀಪದ ಪಾಲನಹಳ್ಳಿ ಗೇಟ್ ಬಳಿ ನಿಯಂತ್ರಣ ಕಳೆದುಕೊಂಡ ಕಾರ್ತಿಕ್, ಸರ್ವೀಸ್ ರಸ್ತೆ ವಿಭಜಕದ ಕಬ್ಬಿಣದ ಗ್ರಿಲ್‌ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಹಿಂಭಾಗದಲ್ಲಿ ಕುಳಿತಿದ್ದ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net