ಮಾತ್ರೆ ನುಂಗಿ ಇಬ್ಬರು ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನ

Crime Logo
Published on

ಬೆಂಗಳೂರು: ಹಣಕಾಸಿನ ವಿಚಾರವಾಗಿ ಜಗಳ ಮಾಡಿಕೊಂಡು ಇಬ್ಬರು ಮಹಿಳೆಯರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಪ್ರಕರಣ ನಡೆದಿದೆ.
ಅಶ್ವಿನಿ (೨೮) ಹಾಗೂ ದೀಪು (೩೩) ಆತ್ಮಹತ್ಯೆಗೆ ಪ್ರಯತ್ನಪಟ್ಟು ಖಾಸಗಿ ಆಸ್ಪತ್ರೆಯ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸಂಬಂಧಿಕರಾಗಿದ್ದಾರೆ. ದೀಪು ಸಿದ್ದಾಪುರದಲ್ಲಿ ವಾಸವಾಗಿದ್ದರೆ ಅಶ್ವಿನಿ ವರ್ತೂರಿನಲ್ಲಿ ವಾಸವಾಗಿದ್ದಾರೆ. ೨೦೨೧ರಲ್ಲಿ ಕಾರ್ಯಕ್ರಮವೊಂದರಲ್ಲಿ ದೀಪು ಅವರು ಶೃತಿ, ಮಧು ಮತ್ತು ಮಂಜುನಾಥ್ ಎಂಬುವವರನ್ನು ಶೃತಿಗೆ ಪರಿಚಯಿಸಿದ್ದರು.ಇವರಿಗೆ ದೀಪು ಹಣ ಕೊಡಿಸಿದ್ದರು. ಈ ಮೂವರು ಆರು ತಿಂಗಳಲ್ಲಿ ಹಣ ವಾಪಸ್ ಮಾಡುವುದಾಗಿ ಹೇಳಿ ಹಂತ-ಹಂತವಾಗಿ ಶೃತಿ ಅವರಿಂದ ೨೮ ಲಕ್ಷ ರೂ.ಹಣ ಪಡೆದುಕೊಂಡಿದ್ದರು. ಆದರೆ ವಿವಿಧ ಕಾರಣಗಳನ್ನು ನೀಡಿ ಹಣ ವಾಪಸ್ ನೀಡಿರಲಿಲ್ಲ. ಇದರಿಂದ ಬೇಸತ್ತ ಅಶ್ವಿನಿ ಹಣ ನೀಡುವಂತೆ ಕೇಳಿದರೆ ಅವಾಚ್ಯ ಶಬ್ಧಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವರ್ತೂರು ಪೊಲೀಸರಿಗೆ ದೀಪು ಸೇರಿ ಇತರರ ವಿರುದ್ಧ ಸೋಮವಾರ ದೂರು ನೀಡಿದ್ದರು. ಅದರಂತೆ ಪೊಲೀಸರು ಗಂಭೀರವಲ್ಲದ ಪ್ರಕರಣ (ಎನ್‌ಸಿಆರ್) ದಾಖಲಿಸಿದ್ದರು. ಈ ಮಧ್ಯೆ ಸಂಜೆ ಇಬ್ಬರು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕೂಡಲೇ ಮನೆಯವರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net