

ಮೆಲ್ಬೋರ್ನ್: ಮನುಷ್ಯರಲ್ಲಿ ಇರುವಂತೆ ಪ್ರಾಣಿಗಳಲ್ಲೂ ಮಾನವೀಯತೆ ಅಂಶ ಇದೆ ಎಂಬುದು ಆಗಾಗ್ಗೆ ಸಾಬೀತಾಗುತ್ತಲೇ ಇರುತ್ತದೆ. ಬೆಕ್ಕಿನ ಮರಿಗೆ ನಾಯಿ ಮೊಲೆಯೂಡಿಸುವುದು ಸೇರಿ ಹಲವು ಆಶ್ಚರ್ಯದಾಯಕ ಕಥನಗಳನ್ನು ಓದಿದ್ದೇವೆ, ವಿಡಿಯೋ ತುಣುಕುಗಳಲ್ಲಿ ನೋಡಿ ಆಸ್ವಾದಿಸಿದ್ದೇವೆ. ಆದರೆ, ದೂರದ ಆಸ್ಟ್ರೇಲಿಯಾದ ಕಡಲತಡಿಯ ಈ ದೃಶ್ಯ ತುಂಬಾ ವಿಶಿಷ್ಟ ಹಾಗೂ ಹೃದಯಸ್ಪರ್ಶಿಯಾಗಿದೆ.
ಏಕೆ? ಏಕೆಂದರೆ ಇಲ್ಲಿ ಜತೆಗಾರನನ್ನು ಕಳೆದುಕೊಂಡು ಹೆಣ್ಣು ಪೆಂಗ್ವಿನ್ಗಳೆರಡು ಪರಸ್ಪರ ಸಂತೈಸಿಕೊಳ್ಳುತ್ತಾ, ದುಃಖವನ್ನು ಮರೆಯಲು ಪ್ರಯತ್ನಿಸುತ್ತಿವೆ.
ಹೌದು, ಇಲ್ಲಿ ಒಂದು ಹಿರಿಯ ಹೆಣ್ಣು ಪೆಂಗ್ವಿನ್ ಮತ್ತು ಒಂದು ಕಿರಿಯ ಹೆಣ್ಣು ಪೆಂಗ್ವಿನ್ಗಳು ಇತ್ತೀಚೆಗೆ ತಮ್ಮ ತಮ್ಮ ಜತೆಗಾರನನ್ನು ಕಳೆದುಕೊಂಡಿವೆ. ಹಿರಿಯ ಪೆಂಗ್ವಿನ್ ಕಡಲ ತಡಿಯಲ್ಲಿನ ಬಂಡೆಯ ಮೇಲೆ ಕೂತು, ಮೆಲ್ಬೋರ್ನ್ ನಗರದಲ್ಲಿ ರಾತ್ರಿ ವೇಳೆ ಬೆಳಗುವ ದೀಪಗಳ ಸಾಲನ್ನು ನೋಡುತ್ತಾ ತನ್ನ ದುಃಖವನ್ನು ಮರೆಯಲು ಪ್ರಯತ್ನಿಸುತ್ತಿತ್ತು.
ಇದನ್ನು ಗಮನಿಸಿದ ಕಿರಿಯ ಹೆಣ್ಣು ಪೆಂಗ್ವಿನ್ ಕೂಡ ಅದರ ಪಕ್ಕ ಹೋಗಿ ಕುಳಿತು, ಹಿರಿಯ ಹೆಣ್ಣು ಪೆಂಗ್ವಿನ್ನ ಬೆನ್ನಮೇಲೆ ತನ್ನ ಬಲರೆಕ್ಕೆಯನ್ನು ಹರವಿ ಸಂತೈಸಲಾರಂಭಿಸಿತು. ಇದರಿಂದ ಹಿರಿಯ ಹೆಣ್ಣು ಪೆಂಗ್ವಿನ್ಗೆ ಸ್ವಲ್ಪ ಸಮಾಧಾನವಾಯಿತು ಎನಿಸುತ್ತದೆ. ಪ್ರೀತಿಯಿಂದ ಕಿರಿಯ ಪೆಂಗ್ವಿನ್ ಮುಖದ ಮೇಲೆ ತನ್ನ ಕೊಕ್ಕಿನಿಂದ ತಿವಿಯುತ್ತಾ, ಆಗಾಗ್ಗೆ ಸಂತೋಷದ ಧ್ವನಿ ಹೊರಡಿಸುತ್ತಾ, ಅದನ್ನೂ ಸಂತೈಸ ತೊಡಗಿತು.
ಈ ಪ್ರದೇಶದಲ್ಲಿ ಪೆಂಗ್ವಿನ್ಗಳ ದೊಡ್ಡ ಗುಂಪೇ ಇದೆ. ಈ ಎರಡು ಪೆಂಗ್ವಿನ್ಗಳ ಪ್ರೀತಿ, ಬಾಂಧವ್ಯ, ಮಾನವೀಯತೆಯ ಗುಣ ಆ ಎಲ್ಲ ಪೆಂಗ್ವಿನ್ಗಳಿಗೂ ಮಾದರಿಯಾಗಿ ಮಾರ್ಪಟ್ಟಿದೆ. ಹಾಗಾಗಿಯೇ ಈ ಎರಡು ಪೆಂಗ್ವಿನ್ಗಳನ್ನು ನೋಡಿ ಅವುಗಳು ಕೂಡ ಆಗಾಗ ಸಂತಸದ ಧ್ವನಿ ಹೊರಡಿಸುತ್ತವೆ ಎಂದು 2019ರ ವಿಶ್ವ ಪೆಂಗ್ವಿನ್ ದಿನದಂದು ಈ ದೃಶ್ಯವನ್ನು ಚಿತ್ರೀಕರಿಸಿಕೊಂಡು, ಛಾಯಾಚಿತ್ರವನ್ನು ತೆಗೆದುಕೊಂಡಿರುವ ಟೊಬಿಯಾಸ್ ಬೌಮ್ಗೇಟ್ನರ್ ಎಂಬುವರು ಹೇಳಿದ್ದಾರೆ.
ಇದೀಗ ಕೋವಿಡ್ 19 ಲಾಕ್ಡೌನ್ನಿಂದಾಗಿ ಇಡೀ ವಿಶ್ವವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪರಸ್ಪರ ಸಾಂತ್ವನ ಹೇಳಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನು ಪ್ರತಿಪಾದಿಸಲು ತಾವು ಈ ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಈ ವಿಡಿಯೋ ಮತ್ತು ಛಾಯಾಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.
ಪೆಂಗ್ವಿನ್ಗಳ ಔದಾರ್ಯಕ್ಕೆ ಮನಸೋತಿರುವ ವ್ಯಕ್ತಿಯೊಬ್ಬರು, ನಿಮ್ಮ ಈ ಸೂಕ್ಷ್ಮಗ್ರಹಿಕೆ ಮತ್ತು ಸಂವೇದನೆಗಾಗಿ ಧನ್ಯವಾದಗಳು. ಪೆಂಗ್ವಿನ್ಗಳ ಬಗ್ಗೆ ನೀವು ತೋರಿರುವ ಹೃದಯವಂತಿಕೆ ಮತ್ತು ಆಪ್ತತೆಯನ್ನು ಕರೊನಾ ಲಾಕ್ಡೌನ್ ಅವಧಿಯಲ್ಲಿ ಪ್ರತಿಯೊಬ್ಬರಲ್ಲೂ ಮೂಡಿಸುವಲ್ಲಿ ಯಶಸ್ವಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.