

ಬೆಂಗಳೂರು: ರಸ್ತೆಬದಿ ಹಾಗೂ ಮನೆಗಳ ಎದುರು ರಾತ್ರಿ ವೇಳೆ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಆರೋಪಿಯನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೋರಹುಣಸೆಯ ಕಿರಣ್(೨೦) ಬಂಧಿತ. ಆರೋಪಿಯಿಂದ ೯ ಲಕ್ಷ ರೂ. ಮೌಲ್ಯದ ೧೨ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಇತ್ತೀಚೆಗೆ ರಾಮಾಲೇಔಟ್‌ನಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನ ಕಳ್ಳತನ ಸಂಬಂಧ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ವರ್ತೂರಿನ ಮತ್ಸಂದ್ರ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಕೊಳ್ಳೇಗಾಲದಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳನ್ನು ವರ್ತೂರಿನ ಸೋರಹುಣಸೆಯ ನೀಲಗಿರಿ ತೋಪಿನಲ್ಲಿ ನಿಲುಗಡೆ ಮಾಡಿದ್ದ. ಅಲ್ಲಿಂದ ಎಲ್ಲ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಬಂಧನದಿಂದ ಬೆಂಗಳೂರು ಸೇರಿ ರಾಜ್ಯದ ಕೆಲ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ೭ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಕಳ್ಳನ ಬಂಧನ:
ಮತ್ತೊಂದು ಪ್ರಕರಣದಲ್ಲಿ ವರ್ತೂರು ಠಾಣಾ ವ್ಯಾಪ್ತಿ ಸಾಯಿ ರೆಸಿಡೆನ್ಸಿಯಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಕೋಗಿಲು ನಿವಾಸಿ ಅಜಿತ್‌ದಾಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಸ್ಸಾಂನ ಅಜಿತ್, ಕೋಗಿಲಿನಲ್ಲಿ ಬಾಡಿಗೆ ಮನೆ ಪಡೆದು ನೆಲೆಸಿದ್ದ. ಮನೆ ಮಾಲೀಕರು ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಬಾಲ್ಕನಿಯಲ್ಲಿರುವ ಸ್ಲೈಡ್ ಡೋರ್ ಒಡೆದು ಒಳ ಪ್ರವೇಶಿಸಿ ೨೦ ಗ್ರಾಂ ಚಿನ್ನಾಭರಣ ಕಳವು ಮಾಡಿದ್ದ. ಬಂಧಿತ ಆರೋಪಿಯಿಂದ ೧.೨೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.