

ನವದೆಹಲಿ: ಕರೊನಾ ಹೆಚ್ಚುತ್ತಿದ್ದಂತೆ ಹಲವು ರಾಜ್ಯಗಳು ಲಾಕ್ಡೌನ್ಗೆ ಮೊರೆ ಹೋಗಿವೆ. ಪಶ್ಚಿಮ ಬಂಗಾಳದಲ್ಲಿ ಜುಲೈ 31ರವರೆಗೆ ಲಾಕ್ಡೌನ್ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ಲಾಕ್ಡೌನ್ ಘೋಷಿಸಿದಾಗ, ಜನರಿಗೆ ಯಾವುದೇ ಮುನ್ಸೂಚನೆ ನೀಡಿರಲಿಲ್ಲ ಎಂಬುದು ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತು. ಇದು ಜನರಲ್ಲಿ ಅಸಮಾಧಾನವನ್ನು ಹುಟ್ಟು ಹಾಕಿತ್ತು. ಈ ಕಾರಣ ಕಾರಣಗಳಿಂದಾಗಿ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ಲಾಕ್ಡೌನ್ ಮುನ್ನ ಘೋಷಣೆ ಮಾಡಲಾಗಿದೆ. ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.
ಗುವಾಹಟಿಯಲ್ಲಿ ಸೋಮವಾರದಿಂದ ( ಜೂನ್ 27) 14 ದಿನಗಳವರೆಗೆ ಸಂಪೂರ್ಣ ಲಾಕ್ಡೌನ್ ಇರಲಿದೆ. ರಾತ್ರಿ 7 ಗಂಟೆಯಿಂದ ಬೆಳಗಿನ 7 ಗಂಟೆವರೆಗೆ ಕರ್ಫ್ಯೂ ವಿಧಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಹಿಮಾಂತ್ ಬಿಸ್ವ ಸರ್ಮ ಹೇಳಿದ್ದಾರೆ. ಇಡೀ ಕಾಮರೂಪ್ ಜಿಲ್ಲೆಗೆ ಅನ್ವಯಿಸಲಿದೆ.
ಲಾಕ್ಡೌನ್ ಅವಧಿಯಲ್ಲಿ ಔಷಧ ಅಂಗಡಿಗಳು ಆಸ್ಪತ್ರೆಗಳು ಮಾತ್ರ ತೆರೆದಿರಲಿವೆ. ಹೀಗಾಗಿ ಭಾನುವಾರವೇ ನಿಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಇತರ ನಗರ ಹಾಗೂ ನಗರಸಭೆ ಪ್ರದೇಶಗಳಲ್ಲೂ ಲಾಕ್ಡೌನ್ ಇರಲಿದ್ದು, ವಾರಾಂತ್ಯದಲ್ಲಿ ಅಗತ್ಯ ಸೇವೆಗಳನ್ನು ಪಡೆದುಕೊಳ್ಳು ಅವಕಾಶವಿರಲಿದೆ. ಬ್ಯಾಂಕ್ಗಳು ಸೀಮಿತ ಅವಧಿಗೆ ತೆರದಿರಲಿವೆ.
ಜೂನ್ 15ರ ನಂತರ ಗುವಾಹಟಿಯಲ್ಲಿ 700 ಹೊಸ ಪ್ರಕರಣಗಳು ವರದಿಯಾಗಿವೆ. ಈ ಕಾರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಲಾಗುತ್ತಿದೆ. ಗುರುವಾರವಷ್ಟೇ ಗುವಾಹಟಿಯೊಂದರಲ್ಲಿಯೇ 133 ಪ್ರಕರಣಗಳು ಪತ್ತೆಯಾಗಿವೆ.
ಅಸ್ಸಾಮ್ನಲ್ಲಿ ಸದ್ಯ 6321 ಪ್ರಕರಣಗಳಿದ್ದು, ಈ ಪೈಕಿ 2,279 ಸಕ್ರಿಯವಾಗಿವೆ. ಒಟ್ಟು 9 ಜನರು ಮೃತಪಟ್ಟಿದ್ದಾರೆ.