ಪರೀಕ್ಷೆ ಮುಂದೂಡಲು ಪ್ರಾಂಶುಪಾಲರನ್ನೇ ಸಾಯಿಸಿದ ವಿದ್ಯಾರ್ಥಿಗಳು! ಏನಿದು ಘಟನೆ? Fake news

untitled-design-2025-10-17t122813407-68f1e90ed0303
Published on

ಮಧ್ಯಪ್ರದೇಶ: ಪರೀಕ್ಷೆಗಳನ್ನು ಮುಂದೂಡುವ ಸಲುವಾಗಿ ಪ್ರಾಂಶುಪಾಲರೇ ಮೃತಪಟ್ಟಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರವನ್ನು ( Fake news ) ಹರಿಬಿಟ್ಟಿರುವ ಆಘತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ.

ಘಟನೆ ಏನು?

ಕಂಪ್ಯೂಟರ್ ಅಪ್ಲಿಕೇಶನ್​​ನ ಮೂರನೇ ಸೆಮಿಸ್ಟರ್​ನ ಇಬ್ಬರು ವಿದ್ಯಾರ್ಥಿಗಳು ಕಾಲೇಜಿನ ಲೆಟರ್‌ಹೆಡ್ ಅನ್ನು ನಕಲು ಮಾಡಿ, ಪತ್ರದಲ್ಲಿ ಪ್ರಿನ್ಸಿಪಾಲ್ ಡಾ. ಅನಾಮಿಕಾ ಜೈನ್ ಅವರ ಹಠಾತ್ ಮರಣದಿಂದಾಗಿ ಅಕ್ಟೋಬರ್ 15 ಮತ್ತು 16 ರಂದು ನಿಗದಿ ಪಡಿಸಿದ್ದ ಆನ್‌ಲೈನ್ ಪರೀಕ್ಷೆಗಳು ಮತ್ತು ತರಗತಿಗಳನ್ನು ಮುಂದೂಡಲಾಗಿದೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ಪ್ರಾಂಶುಪಾಲರ ಪ್ರತಿಕ್ರಿಯೆ ಏನು?

ಪರೀಕ್ಷೆಗಳನ್ನು ಮುಂದೂಡುವ ಉದ್ದೇಶದಿಂದ ವಿದ್ಯಾರ್ಥಿಗಳು ನಕಲಿ ಪತ್ರವನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದನ್ನು ಗಮನಿಸಿದ ಜನರು ಸಂತಾಪ ಸೂಚಿಸಲು ಮನೆಗೆ ಭೇಟಿ ನೀಡಿದ್ದರು. ಇದು ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ತೊಂದರೆ ಉಂಟು ಮಾಡಿತು ಎಂದು ಅನಾಮಿಕಾ ಜೈನ್ ತಿಳಿಸಿದ್ದಾರೆ.

60 ದಿನಗಳ ಅಮಾನತು

ಪ್ರಾಂಶುಪಾಲರ ದೂರಿನ ಆಧಾರದ ಮೇಲೆ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಇಂದೋರ್​ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ವಿದ್ಯಾರ್ಥಿಗಳು ಲಿಖಿತವಾಗಿ ತಮ್ಮ ತಪ್ಪೊಪ್ಪಿಕೊಂಡಿದ್ದು, ಅವರನ್ನು 60 ದಿನಗಳವರೆಗೆ ಕಾಲೇಜಿನಿಂದ ಅಮಾನತುಗೊಳಿಸಲು ಕಾಲೇಜು ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

ಕೆಲವು ಜನರು ತಮ್ಮನ್ನು ಬಹಳ ಸಮಯದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಡಾ. ಜೈನ್ ದೂರು ನೀಡಿದ್ದಾರೆ . ಆದಾಗ್ಯೂ, ಅವರು ಈ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ.

ಹೋಳ್ಕರ್ ವಿಜ್ಞಾನ ಕಾಲೇಜನ್ನು 1891 ರಲ್ಲಿ ಇಂದೋರ್‌ನ ಆಗಿನ ಆಡಳಿತಗಾರ ಶಿವಾಜಿ ರಾವ್ ಹೋಳ್ಕರ್ ಸ್ಥಾಪಿಸಿದರು. ಇದು ಮಧ್ಯ ಭಾರತದ ಅತ್ಯಂತ ಹಳೆಯ ವಿಜ್ಞಾನ ಕಾಲೇಜುಗಳಲ್ಲಿ ಒಂದಾಗಿದೆ. ಪ್ರಸ್ತುತ, ಸುಮಾರು 15,000 ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net