ಶಿವನ ದೇವಸ್ಥಾನದಲ್ಲೇ ಇಬ್ಬರು ಸಾಧುಗಳ ಹತ್ಯೆ; ಮೃತದೇಹಗಳಿಗೆ ಬೆಂಕಿ, ಜಮೀನಿಗಾಗಿ ಕೃತ್ಯ? | Uttar Pradesh Murder

ಉತ್ತರ ಪ್ರದೇಶದ ಶಿವನ ದೇವಸ್ಥಾನದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿ, ಬಳಿಕ ಮೃತದೇಹಗಳಿಗೆ ಬೆಂಕಿ ಹಚ್ಚಿರುವ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Shahjahanpur Murder
Published on: 

Uttar Pradesh Crime: ಉತ್ತರ ಪ್ರದೇಶದಲ್ಲಿ ಶಿವನ ದೇವಸ್ಥಾನದೊಳಗೆ ಇಬ್ಬರು ಸಾಧುಗಳನ್ನು ಹತ್ಯೆ ಮಾಡಿ, ಮೃತದೇಹಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಸುಮಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಶಹಜಹಾನ್‌ಪುರದ ಸುಥಾ ಗ್ರಾಮದ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಬೆಳಗ್ಗೆ 7ರ ಸುಮಾರಿಗೆ ದೇವಸ್ಥಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಲ್ಲಿಗೆ ತೆರಳಿದಾಗ, ಒಬ್ಬ ಸಾಧುವಿನ ಮೃತದೇಹ ಉರಿಯುತ್ತಿತ್ತು. ಮತ್ತೊಬ್ಬರ ಮೃತದೇಹ ಬಹುತೇಕ ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು, ಗೋಪಾಲ್ ದಾಸ್ (70) ಹಾಗೂ ಬಿಹಾರಿ ದಾಸ್ (60) ಎಂಬ ಸಾಧುಗಳ ಕೊಲೆಯಾಗಿದ್ದು, ಗೋಪಾಲ್ ದಾಸ್ ಸುಮಾರು 20 ವರ್ಷಗಳಿಂದ ದೇವಸ್ಥಾನದಲ್ಲೇ ವಾಸವಾಗಿದ್ದರು. ಬಿಹಾರಿ ದಾಸ್ ಒಂದು ತಿಂಗಳ ಹಿಂದೆ ಅವರ ಶಿಷ್ಯನಾಗಿ ದೇವಸ್ಥಾನಕ್ಕೆ ಬಂದಿದ್ದರು.

ದೇಗುಲದ ದ ಜಮೀನಿಗಾಗಿ ಹತ್ಯೆ?

ದೇವಸ್ಥಾನದಲ್ಲಿರುವ ಜಮೀನಿನ ಮೇಲೆ ಹಿಡಿತ ಸಾಧಿಸಲು ಸಾಧುಗಳನ್ನು ಅಲ್ಲಿಂದ ಓಡಿಸುವ ಉದ್ದೇಶದಿಂದ ಸುಮಿತ್ ಈ ಕೃತ್ಯ ಎಸಗಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬಿಹಾರಿ ದಾಸ್ ಅವರ ಸಂಬಂಧಿ ಪ್ರದೀಪ್ ಸಿಂಗ್ ಕೂಡ ಇದೇ ಆರೋಪ ಮಾಡಿದ್ದು, ಸುಮಿತ್ ಈ ಹಿಂದೆ ಸಾಧುಗಳ ಮೇಲೆ ಹಲ್ಲೆ ನಡೆಸಿದ್ದ ಎಂದು ಹೇಳಿದ್ದಾರೆ.

ದೇವಸ್ಥಾನ ಬಿಟ್ಟು ಹೋಗುವಂತೆ ಸಾಧುಗಳಿಗೆ ಒತ್ತಡ

ಸ್ಥಳೀಯರ ಪ್ರಕಾರ, ಸುಮಿತ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದು, ಇತ್ತೀಚೆಗೆ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲೂ ಆತನ ಹೆಸರು ಕೇಳಿಬಂದಿತ್ತು. ಸುಮಾರು ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ಆತ, ಸಾಧುಗಳು ದೇವಸ್ಥಾನ ಬಿಟ್ಟು ಹೋಗುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ.

ಪತ್ನಿ ಸಾವಿನ ಬಳಿಕ ದೇವಸ್ಥಾನದಲ್ಲೇ ವಾಸ

ಗೋಪಾಲ್ ದಾಸ್ ಪತ್ನಿ ಮೃತಪಟ್ಟ ಬಳಿಕ ಮನೆ ತೊರೆದು ದೇವಸ್ಥಾನದ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಒಂದು ವಾರದ ಹಿಂದೆ ಮನೆಗೆ ಬಂದಿದ್ದ ಅವರು ಗಯಾಕ್ಕೆ ಹೋಗುವುದಾಗಿ ಹೇಳಿದ್ದರು. ಐದು ದಿನಗಳ ಹಿಂದೆ ಗಯಾಕ್ಕೆ ತೆರಳಿದ್ದ ಅವರು, ದಾರಿಯಲ್ಲಿ ಗಾಯಗೊಂಡು ವಾಪಸ್ ಬಂದಿದ್ದರು ಎಂದು ಅವರ ಸಹೋದರ ರಾಮದುಲಾರೆ ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣೆದುರೇ ಕುಸಿದ ಬೃಹತ್ ಬೆಟ್ಟ; ಉತ್ತರಾಖಂಡದ ಕುಮಾಂನಲ್ಲಿ ಬೆಚ್ಚಿಬೀಳಿಸುವ ದೃಶ್ಯ! | Uttarakhand Landslide

ಆರೋಪಿ ವಶಕ್ಕೆ, ತನಿಖೆ ಚುರುಕು

ಶಹಜಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಾ ಭವ್ರೆ, ಸುಮಿತ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇಬ್ಬರು ಸಾಧುಗಳ ಹತ್ಯೆಗೆ ನಿಖರ ಕಾರಣವೇನು ಹಾಗೂ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net