

ಬೇಲೂರು: ತಾಲೂಕಿನ ಬಳ್ಳೂರು ಗ್ರಾಮ ಸಮೀಪ ಲಾರಿ ಹಾಗೂ ಕ್ಯಾಂಟರ್ ನಡುವೆ ಅಪಘಾತ ಸಂಭವಿಸಿದ ಬಳಿಕ ಚಾಲಕನ ನಿಯಂತ್ರಣ ಕಳೆದುಕೊಂಡ ಕ್ಯಾಂಟರ್ ಮರಕ್ಕೆ ಗುದ್ದಿದ ಪರಿಣಾಮ ಚಾಲಕ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೇಲೂರಿನಿಂದ ಮೂಡಿಗೆರೆಗೆ ತೆರಳುತಿದ್ದ ಲಾರಿ ಹಾಗೂ ಮೂಡಿಗೆರೆ ಕಡೆಯಿಂದ ಬೇಲೂರಿಗೆ ಬರುತಿದ್ದ ಕ್ಯಾಂಟರ್ ನಡುವೆ ತಾಲೂಕಿನ ಬಳ್ಳೂರು ಗ್ರಾಮದ ಸಮೀಪ ಮುಂಜಾನೆ 2 ಗಂಟೆ ಸಮಯದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂದರ್ಭ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ವಾಹನ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಗುದ್ದಿ ಅಂಟಿಕೊಂಡಿದೆ. ಇದರಿಂದ ಗಾಯಗೊಂಡು ಸಿಲುಕಿಕೊಂಡಿದ್ದ 33 ವರ್ಷದ ವಿನೋದ್, 32 ವರ್ಷದ ಮನು ಅವರನ್ನು ತಕ್ಷಣಕ್ಕೆ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಜೆಸಿಬಿ ಹಾಗೂ ಕ್ರೇನ್ ಬಳಸಿ ಪೊಲೀಸರ ಸಮ್ಮುಖದಲ್ಲಿ ವಾಹನ ಮತ್ತು ಗಾಯಾಳುಗಳನ್ನು ಹೊರ ತೆಗೆಯಲಾಯಿತು.
ಗಾಯಾಳುಗಳಿಗೆ ಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದ್ದು, ಸ್ಥಳಕ್ಕೆ ಬೇಲೂರು ಪೊಲೀಸ್ ಠಾಣೆ ಪಿಎಸ್‌ಐ ಶಿವನಗೌಡ ಪಾಟೀಲ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.