

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ತೆಲಂಗಾಣ ಮೂಲದ ಮಹಿಳೆ ಸೇರಿ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣ ಮೂಲದ ದುರ್ಗಾ ಅನ್ನಾರೆಡ್ಡಿ(೪೦) ಮತ್ತು ಈಕೆಯ ತಂಗಿಯ ಪತಿ ವೆಂಕಟೇಶ್ ರಾವ್(೪೪) ಬಂಧಿತರು. ಆರೋಪಿಗಳಿಂದ ೨೨ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರ, ಮೊಬೈಲ್, ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಜಯನಗರದಲ್ಲಿ ವಾಸವಾಗಿರುವ ವೈದ್ಯೆಯೊಬ್ಬರ ಮನೆಯಲ್ಲಿ ಕಳವು ಮಾಡಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರುದಾರರು ಜಯನಗರದ ೧ನೇ ಬ್ಲಾಕ್‌ನಲ್ಲಿ ವಾಸವಾಗಿದ್ದಾರೆ. ೨ ವರ್ಷಗಳ ಹಿಂದೆ ಏಜೆನ್ಸಿಯೊಂದರ ಮೂಲಕ ತೆಲಂಗಾಣದ ದುರ್ಗಾಳನ್ನು ಮನೆಕೆಲಸಕ್ಕೆ ನೇಮಿಸಿಕೊಂಡಿದ್ದರು. ಈ ಮಧ್ಯೆ ವೈದ್ಯೆ ಅನಾರೋಗ್ಯಕ್ಕೀಡಾಗಿದ್ದರಿಂದ ಅಡುಗೆ ಹಾಗೂ ಮನೆಯ ಎಲ್ಲಾ ಕೆಲಸಗಳನ್ನು ದುರ್ಗಾ ನಿರ್ವಹಣೆ ಮಾಡುತ್ತಿದ್ದಳು. ಹೀಗಾಗಿ ಬೆಡ್‌ರೂಮ್ ಸೇರಿ ಎಲ್ಲೆಡೆ ಓಡಾಡುತ್ತಿದ್ದಳು. ಈ ವೇಳೆ ಆಗಾಗ್ಗೆ ಕಬೋರ್ಡ್‌ನಲ್ಲಿದ್ದ ಚಿನ್ನಾಭರಣಗಳನ್ನು ಆಕೆ ಕಳವು ಮಾಡುತ್ತಿದ್ದಳು. ಆದರೆ, ಜು.೨೮ರಂದು ದೂರುದಾರೆ ನೋಡಿದಾಗ ಮನೆ ಕೆಲಸದಾಕೆ ದುರ್ಗಾ ಕಾಣಿಸಿರಲಿಲ್ಲ. ಕರೆ ಮಾಡಿದಾಗ ಆಕೆಯ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಅನುಮಾನಗೊಂಡು ಮನೆಯಲ್ಲಿರುವ ಕಬೋರ್ಡ್ ನೋಡಿದಾಗ ಡೈಮಂಡ್, ಚಿನ್ನಾಭರಣ, ಬೆಳ್ಳಿಯ ವಸ್ತುಗಳು, ಮೊಬೈಲ್‌ಗಳು, ಬೆಲೆಬಾಳುವ ವಾಚ್‌ಗಳು ನಾಪತ್ತೆಯಾಗಿದ್ದವು, ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ತೆಲಂಗಾಣದ ನ್ಯೂ ರಂಗಪುರ ಗ್ರಾಮದಲ್ಲಿರುವ ಆಕೆಯ ಸಹೋದರಿ ಮನೆಯಲ್ಲಿ ದುರ್ಗಾ ಆಶ್ರಯ ಪಡೆದುಕೊಂಡಿರುವುದು ಗೊತ್ತಾಗಿ ಬಳಿಕ ಆಕೆಯನ್ನು ಅಲ್ಲಿಯೇ ಬಂಧಿಸಲಾಗಿದೆ. ಈ ವೇಳೆ ಕಳವು ಚಿನ್ನಾಭರಣಗಳನ್ನು ತನ್ನ ಸಹೋದರಿಯ ಪತಿ ವೆಂಕಟೇಶ್ ರಾವ್ ಮೂಲಕ ಮಾರಾಟ ಮಾಡಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಹೀಗಾಗಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.