ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾವು

accident-15
Published on

ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸೇರಿ ಇಬ್ಬರು ಸವಾರರು ಮೃತಪಟ್ಟಿರುವ ಪ್ರಕರಣ ನೈಸ್ ರಸ್ತೆಯಲ್ಲಿ ನಡೆದಿದ್ದು, ತಲಘಟ್ಟಪುರಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಕೊಳತ್ತೂರು ಗ್ರಾಮದ ನಿವಾಸಿ ಮಹೇಶ್ (೪೩) ಮತ್ತು ಅವರ ಸಹೋದರಿಯ ಪುತ್ರಿ, ನುಗ್ಗೆಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ ಅಭಿಲಾಷಾ (೨೬) ಮೃತರು.
ಮಹೇಶ್ ನಗರದಲ್ಲಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಅಭಿಲಾಷಾ ಮೈಸೂರು ರಸ್ತೆಯಲ್ಲಿರುವ ಕಂಪನಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದರು. ಮಹೇಶ್ ತಾತಾಗುಣಿಯಲ್ಲಿ ವಾಸವಾಗಿದ್ದರು. ಅವರ ಮನೆ ಸಮೀಪದಲ್ಲೇ ಅಭಿಲಾಷಾ ಕೂಡ ನೆಲೆಸಿದ್ದರು. ಬುಧವಾರ ರಾತ್ರಿ ೭.೧೫ರ ಸುಮಾರಿಗೆ ಅಭಿಲಾಷಾ ಕೆಲಸ ಮುಗಿಸಿಕೊಂಡು ಮಹೇಶ್ ಜತೆ ಹೋಂಡಾ ಆಕ್ಟೀವಾ ಬೈಕ್‌ನಲ್ಲಿ ಮನೆಗೆ ಇದೇ ಮಾರ್ಗದಲ್ಲಿ ಹೋಗುತ್ತಿದ್ದರು. ಆಗ ಕನಕಪುರ ರಸ್ತೆ ಕಡೆ ಹೋಗುವ ನಾಗೇಗೌಡನ ಪಾಳ್ಯ ಸೇತುವೆ ಹತ್ತಿರದ ನೈಸ್ ರಸ್ತೆ ಬದಿಯಲ್ಲಿ ಈಚರ್ ಗೂಡ್ಸ್ ವಾಹನ ಚಾಲಕ ಯಾವುದೇ ಸೂಚನಾ ಇಂಡಿಕೇಟರ್ ಲೈಟ್‌ಗಳನ್ನು ಹಾಕದೇ ನಿಲ್ಲಿಸಿದ್ದ. ಹೀಗಾಗಿ ಮಹೇಶ್, ರಸ್ತೆ ಬದಿ ನಿಲ್ಲಿಸಿದ್ದ ಗೂಡ್ಸ್ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದುಕೊಂಡಿದ್ದು, ಇಬ್ಬರಿಗೂ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಇಬ್ಬರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಲಘಟ್ಟಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net